ನಾನು, ಸಚಿವ ಶ್ರೀರಾಮುಲು ಸೇರಿ ಗಾರ್ಮೆಂಟ್ಸ್ ಕಾರ್ಮಿಕರ ಜೀವ ವಿಮೆ ಪ್ರೀಮಿಯಂ ಕಟ್ಟಿ ಕೊಡುತ್ತೇವೆ: ಶಾಸಕ ರೆಡ್ಡಿ
ಬಳ್ಳಾರಿ,ನ.24: ಬಳ್ಳಾರಿ ತಾಲೂಕು ಗಾರ್ಮೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ನ ಎಲ್ಲಾ ಕಾರ್ಮಿಕ ಸದಸ್ಯರು ಜೀವವಿಮೆ ಮಾಡಿಸಿದರೆ ಅವರ ವಾರ್ಷಿಕ ಪ್ರೀಮಿಯಂ ಕಟ್ಟುವ ಜವಾಬ್ದಾರಿಯನ್ನು ನಾನು ಮತ್ತು ಸಚಿವ ಶ್ರೀರಾಮುಲು ತೆಗೆದುಕೊಳ್ಳುತ್ತೇವೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ಬಳ್ಳಾರಿ ನಗರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಗಾರ್ಮೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಉದ್ಘಾಟನೆ ಹಾಗೂ ಪ್ರಥಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಗಾರ್ಮೆಂಟ್ಸ್ ಕಾರ್ಮಿಕರ ಜೀವ ವಿಮೆಯ ಪ್ರೀಮಿಯಂ ಕಟ್ಟುವ ಜವಾಬ್ದಾರಿ ನನ್ನದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ, ಅವರ ಜೊತೆ ನಾನೂ ಪ್ರೀಮಿಯಂ ಕಟ್ಟಲು ಕೈಜೋಡಿಸುವೆ, ಕಾರ್ಮಿಕರಿಗೆ ಜೀವ ವಿಮೆ ಬಹಳ ಮುಖ್ಯ, ನಿಮಗೆ ನಿಮ್ಮ ಕಷ್ಟ ಕಾಲದಲ್ಲಿ ನೆರವಿಗೆ ಬರುವುದೇ ಜೀವ ವಿಮೆಯ ಹಣ, ಹೀಗಾಗಿ ಎಲ್ಲರೂ ಇದರ ಬಗ್ಗೆ ಗಮನ ಹರಿಸಬೇಕು, ನಾನು ಒಬ್ಬ ಕಾರ್ಮಿಕನಿಗೆ ಜೀವ ವಿಮೆ ಮಾಡಿಸಿದ್ದೆ, ಆತನಿಗೆ ಯಾವುದೋ ಒಂದು ಅಪಘಾತ ಆದ ಸಂದರ್ಭ ನಾಲ್ಕು ರೂ. ಜೀವ ವಿಮೆ ಪರಿಹಾರ ಬಂದಿತು ಎಂದರು.
ಮುಂಡ್ರಿಗಿ ಬಳಿ ಸರ್ಕಾರದಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ, ಕಾರ್ಮಿಕರು ಇದರ ಲಾಭ ಪಡೆಯಬೇಕು ಎಂದ ಶಾಸಕ ರೆಡ್ಡಿ, ಮುಂಡ್ರಿಗಿ ಬಳಿ ರಾಜ್ಯ ಸರ್ಕಾರ ಹಾಗೂ ಬೈನರಿ ಸಂಸ್ಥೆ ನಡುವ ಒಪ್ಪಂದ ಆಗಿದ್ದು, ಬಟ್ಟೆಗಳ ಉತ್ಪಾದನೆಯ ಫ್ಯಾಕ್ಟರಿ ಸ್ಥಾಪನೆ ಆಗಲಿದ್ದು, ಅಂದಾಜು 5 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಸಿ.ಶ್ರೀನಿವಾಸರಾವ್ ಮಾತನಾಡಿ; ಕಳೆದ ಹಲವು ವರ್ಷಗಳಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ, ಆದರೆ ಬಳ್ಳಾರಿಯ ಜೀನ್ಸ್ ಪ್ಯಾಂಟ್ ಗಳ ಬೆಲೆ ಹೆಚ್ಚಾಗಿಲ್ಲ, ಯಾಕೆಂದರೆ ನಮ್ಮಲ್ಲಿ ಉತ್ಪಾದನೆಯಾಗುವ ಜೀನ್ಸ್ ಪ್ಯಾಂಟ್ ಗಳ ಗುಣಮಟ್ಟ ಆ ಮಟ್ಟಿಗಿದೆ, ಗುಣಮಟ್ಟ ಉತ್ತಮವಾದರೆ ಬೆಲೆಯನ್ನೂ ಸಹ ಹೆಚ್ಚಿಸಬಹುದು, ಹೆಚ್ಚು ಲಾಭ ಮಾಡಬಹುದು, ಆದರೆ ಹಾಗಾಗುತ್ತಿಲ್ಲ, ಆದ್ದರಿಂದ ಜೀನ್ಸ್ ಉತ್ಪಾದನೆಯ ಗುಣಮಟ್ಟ ಉತ್ತಮಪಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಶನ್ ನ ಅಧ್ಯಕ್ಷ ಸಿ.ಇಬ್ರಾಹಿಂ ಬಾಬು; ನಾವು ಜೀನ್ಸ್ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಬೇಕಾದರೆ ಸಂಘಟಿತರಾಗಲೇಬೇಕು, ಕೊರೋನಾ ಸಂದರ್ಭದಲ್ಲಿ ನಾವು ಕಷ್ಟ ಏನು ಅಂತ ನೋಡಿದ್ದೇವೆ, ಸರ್ಕಾರ ಕಾರ್ಮಿಕರಿಗೆ ಪರಿಹಾರ ಕೊಟ್ಟರೂ ಎಷ್ಟೋ ಜನ ಗಾರ್ಮೆಂಟ್ಸ್ ಕಾರ್ಮಿಕರಿಗೆ ಪರಿಹಾರ ಸಿಗಲಿಲ್ಲ, ನಮ್ಮ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ನಾವು ನಾಲ್ಕು ದಿನ ಕೆಲಸಕ್ಕೆ ರಜೆ ಹಾಕಿ ಅರ್ಜಿ ಸಲ್ಲಿಸಲು ಸಮಯ ವ್ಯರ್ಥ ಮಾಡುತ್ತೇವೆ, ನಮ್ಮ ಸಂಘದಿಂದಲೇ ನಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುವಂತಾದರೆ ಅನುಕೂಲ ಅಲ್ಲವೇ? ಎಂದು ಹೇಳಿದರು.
ಇದು ನಮ್ಮ ಸ್ವಂತ ಹಿತಾಸಕ್ತಿಗೆ ಮಾಡಿದ ಸಂಘಟನೆ ಅಲ್ಲ ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನಿಗೂ ಕಲ್ಯಾಣ ಮಾಡುವುದೇ ನಮ್ಮ ಅಸೋಸಿಯೇಶನ್ನ ಗುರಿ, ಇದರಲ್ಲಿ ಯಾವುದೇ ಪಾರ್ಟಿ ಪಕ್ಷ ಬೇಧ ಇಲ್ಲ, ಕಾರ್ಮಿಕರ ವಿಚಾರ ಬಂದಾಗ ನಾನು ನಿಮ್ಮ ಪರ ಮಾತಾಡುವೆ, ಸಚಿವ ಶ್ರೀರಾಮುಲು ಇರಲಿ, ಶಾಸಕ ಸೋಮಶೇಖರ ರೆಡ್ಡಿ ಇರಲಿ ಇವರನ್ನು ನಿಮ್ಮ ಪರವಾಗಿ ಪ್ರಶ್ನೆ ಮಾಡುವೆ, ಇದರಲ್ಲಿ ಅನುಮಾನ ಬೇಡ ಎಂದರು.
ಜೀನ್ಸ್ ಉದ್ಯಮದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯರಿಗೆ ಅಸೋಸಿಯೇಶನ್ನ ಪರವಾಗಿ ಸನ್ಮಾನ ಮಾಡಲಾಯಿತು.
ಅಸೋಸಿಯೇಶನ್ನ ವೆಬ್ ಸೈಟ್ ಹಾಗೂ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಯಿತು.
ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಅಸೋಸಿಯೇಶನ್ನ ಕಾರ್ಯದರ್ಶಿ ಮುರಳಿ ಕಾಂಬ್ಳೆ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.