ಕಂದಾಯ ನೌಕರರ ಮೇಲೆ ಹಲ್ಲೆ ಖಂಡಿಸಿ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ
ಬಳ್ಳಾರಿ : ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪದೇ ಪದೇ ದೌರ್ಜನ್ಯ ನಡೆಸುತ್ತಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಬಳ್ಳಾರಿ ತಾಲೂಕಿನ ಕೆಲವು ಭಾಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಏಕಾಏಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಇಂತವರ ಮೇಲೆ ಕಾನೂನು ರೀತ್ಯಾ ದಂಡನೆಯನ್ನು ವಿಧಿಸಿ ಸರ್ಕಾರಿ ನೌಕರರಿಗೆ ಸಮರ್ಪಕವಾಗಿ ಸೇವೆಯನ್ನು ಮಾಡುವಂತೆ ಮುಕ್ತವಾದ ವಾತಾವರಣವನ್ನು ಕಲ್ಪಿಸಿ ಕೊಡಬೇಕು ಹಾಗೂ ಭದ್ರತೆ ಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಕಂದಾಯ ಇಲಾಖೆಯ ನೌಕರರಿಗೆ ಸೂಕ್ತ ರಕ್ಷಣೆಯನ್ನು ನೀಡಿ, ನೌಕರರ ಮೇಲೆ ಪದೇ ಪದೇ ನಡೆಯುವ ಹಲ್ಲೇ, ದೌರ್ಜನ್ಯ ಹಾಗೂ ಇತರೆ ಘಟನೆಗಳನ್ನು ನಡೆಯದಂತೆ ಮುಂಜಾಗೃತವಾಗಿ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕಾನೂನು ನಿಯಮಗಳನ್ನು ರೂಪಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.