*ಇಎಸ್ಐಸಿ ಆಸ್ಪತ್ರೆ ಭೂಮಿಪೂಜೆಗೆ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ – ತಿಪ್ಪೇಸ್ವಾಮಿ ಗಡ್ಡೆ*
ಗಣಿನಾಡು ವಾರ್ತೆ
ಬಳ್ಳಾರಿ : ಬಳ್ಳಾರಿ ಜಿಲ್ಲೆಗೆ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯ ನಿರ್ಮಾಣ ಮಾಡಲು ಮಂಜೂರಾಗಿದ್ದು, ತ್ವರಿತವಾಗಿ ಭೂಮಿಪೂಜೆ ಮಾಡಬೇಕಾದ ಜನಪ್ರತಿನಿಧಿಗಳೇ ಮುಂದಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಗಡ್ಡೆ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಆನೇಕ ಹೋರಾಟದ ಫಲವಾಗಿ 2017ರಲ್ಲಿ ಇಎಸ್ಐಸಿ ಮಂಜೂರಾಗಿದ್ದು, 100 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಐದು ಎಕರೆ ಭೂಮಿ ಕೂಡ ಮಂಜೂರು ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಗತಿಯಲ್ಲಿದೆ. ಆದರೆ ಚುನಾಯಿತ ಜನಪ್ರತಿನಿಧಿಗಳು, ಬಳ್ಳಾರಿ ಸಂಸದರು, ಇಎಸ್ಐಸಿ ಅಧಿಕಾರಿಗಳ ಹಾಗೂ ಜಿಲ್ಲಾಡಳಿತ ಪ್ರಯತ್ನವೂ ಕೂಡ ಆಮೆಗತಿಯಲ್ಲಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕಾರ್ಮಿಕರು ಬಳ್ಳಾರಿ ಜಿಲ್ಲೆಯಲ್ಲಿದ್ದು, ಹೆಚ್ಚು ಕಾರ್ಮಿಕರ ಸಂಖ್ಯೆ ಹೊಂದಿದೆ ರಾಜ್ಯದ ಎರಡನೇ ಜಿಲ್ಲೆಯಾಗಿದೆ. ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಒಂದೇ ಬಾರಿಗೆ ಇಎಸ್ಐಸಿ ಆಸ್ಪತ್ರೆ ಮಂಜೂರಾಗಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆ ಕಾರ್ಮಿಕರ ಸಂಖ್ಯೆ ಹೊಂದಿದ್ದರು, ಇಎಸ್ಐಸಿ ಆಸ್ಪತ್ರೆ ನಿರ್ಮಾಣ ಮಾಡಲು ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಈಗಾಗಲೇ ಅರ್ಧದಷ್ಟು ಕೆಲಸ ಮುಗಿದಿದೆ. ಆದರೆ ಬಳ್ಳಾರಿಯಲ್ಲಿ ಇಎಸ್ಐಸಿ ಆಸ್ಪತ್ರೆ ನಿರ್ಮಾಣಕ್ಕೆ ಜನಪ್ರತಿನಿಧಿಗಳ ಹಿಚ್ಛಾಶಕ್ತಿ ಕೊರತೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಕಾರ್ಮಿಕರಿದ್ದು, ಸದರಿ ಕಾರ್ಮಿಕರಿಂದ ಒಂದು ತಿಂಗಳಿಗೆ 2 ಕೋಟಿ, 70ಲಕ್ಷ ಹಣ ಸಂಗ್ರಹವಾಗುತ್ತಿದೆ. ಇಎಸ್ಐಸಿ ಅಡಿಯಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳು ಸಿಗದಿರುವುದು ಖಂಡನೀಯ. ತ್ವರಿತಗತಿಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೇವಲ 4 ಇಎಸ್ಐಸಿ ವೈದ್ಯಕೀಯ ಕೇಂದ್ರಗಳಿದ್ದು, ಮೂರು ಪ್ರಥಮ ಚಿಕಿತ್ಸೆ ಕೇಂದ್ರ ಮತ್ತು ಒಂದು ಖಾಸಗಿ ಮಲ್ಪಿ ಸ್ಪಷಾಲಿಟಿ ಇದ್ದು, ಇಲ್ಲಿನ ಕಾರ್ಮಿಕರು, ಯಥೇಚ್ಚವಾಗಿದ್ದಾರೆ. ಹಾಗಾಗಿ ಆ ಕೇಂದ್ರಗಳು ಸಾಲುತ್ತಿಲ್ಲ. ಆದಕ್ಕಾಗಿ ತ್ವರಿತಗತಿಯಲ್ಲಿ ಪ್ರತಿ ತಾಲ್ಲೂಕಿಗೆ ಒಂದು ಅಥವಾ ಡಿಸ್ಪೆನ್ಸರಿ ಕೇಂದ್ರಗಳನ್ನು ಆರಂಭಿಸಬೇಕು. ಕಾರ್ಮಿಕರ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ ಬಿಲ್ಗಳು ತ್ವರಿತವಾಗಿ ಮೂರು ತಿಂಗಳೊಳಗಾಗಿ ಕ್ಲೀಯರ್ ಆಗುವಂತೆ ಸೂಚಿಸಬೇಕು ಎಂದರು.
ಇಎಸ್ಐಸಿ ಸೌಲಭ್ಯ ಅಡಿಯಲ್ಲಿ ಕಾರ್ಮಿಕರಿಗೆ ತುರ್ತು ಚಿಕಿತ್ಸೆ ಎದುರಾದಾಗ ಹೆಚ್ಚಿನ ಚಿಕಿತ್ಸೆಗಾಗಿ ಹೋಗುವ ಸಮಯದಲ್ಲಿ 24*7 ವಿಶೇಷ ಅಂಬ್ಯುಲೆನ್ಸ್ ಸೇವೆ ಒದಗಿಸಬೇಕು. ಜಿಲ್ಲೆಯಲ್ಲಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ಕೊರತೆ ಇದ್ದು, ಜಿಲ್ಲಾಡಳಿತ ಮತ್ತು ಇಎಸ್ಐಸಿ ಸಂಬಂಧಿಸಿದ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಸೌಲಭ್ಯದ ಕುರಿತು ಜನರಿಗೆ ಕಾರ್ಮಿಕರಿಗೆ ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಕುಂದು- ಕೊರತೆಗಳ ಸಭೆಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಂಬಯ್ಯ, ಕೋರಿ ಅಂಜನೇಯ್ಯ, ಪ್ರಕಾಶ್, ಪವನ್ ಕುಮಾರ್, ಬಾಬು, ಸಂತೋಷ್, ರವಿಕುಮಾರ್, ಜಗದೀಶ್ ಸೇರಿದಂತೆ ಹಲವರು ಇದ್ದರು.
********