ಅಲೆಮಾರಿಗಳು ಸಂಘಟಿತರಾಗಬೇಕು: ವಾಲ್ಮೀಕಿಶ್ರೀ
ಎಸ್ಸಿ, ಎಸ್ಟಿ ಹಾಗೂ ಅಲೆಮಾರಿಗಳ ಐಕ್ಯತಾ ಸಮಾವೇಶ; ಜಿಲ್ಲಾ ಸಂಘ ಉದ್ಘಾಟನೆ
ಬಳ್ಳಾರಿ, ಮಾ.11: ಅಲೆಮಾರಿಗಳು ಸಂಘಟಿತರಾಗಬೇಕು. ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಶನಿವಾರ ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಹಾಗೂ ಬುಡಕಟ್ಟು ಅಲೆಮಾರಿಗಳ ಮಹಾಸಭಾ ವತಿಯಿಂದ ಏರ್ಪಡಿಸಲಾಗಿದ್ದ ಐಕ್ಯತಾ ಸಮಾವೇಶ ಹಾಗೂ ಜಿಲ್ಲಾ ಸಂಘದ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅಲೆಮಾರಿಗಳು ಅಲೆಮಾರಿಗಳಾಗಿಯೇ ಉಳಿಯಬಾರದು. ಸಾಮಾಜಿಕವಾಗಿ ಮುಂದೆ ಬರಬೇಕು. ಅಲೆಮಾರಿಗಳು ಶಿಕ್ಷಣದಿಂದ ವಂಚಿತರಾಗಿ, ಭಿಕ್ಷಾಟನೆ ಮಾಡಿಕೊಂಡು ಜೀವನ ನಡೆಸುವ ಕೆಲಸ ನಡೆಯುತ್ತಿದೆ. ಎಸ್ಸಿ, ಎಸ್ಟಿ ಹಾಗೂ ಅಲೆಮಾರಿಗಳು ಒಗ್ಗಟ್ಟಾಗಬೇಕು. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ವೈ. ಶಿವಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ; ಸಂಘಟನೆಯನ್ನು ತಳಮಟ್ಟದಿಂದ ಸಂಘಟಿಸಿ, ಎಲ್ಲಾ ಅಲೆಮಾರಿ ಸಮುದಾಯದ ಜನರಿಗೆ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳು ಸಂದರೂ ಕೂಡ ಅಲೆಮಾರಿಗಳ ಜೀವನ ಸುಧಾರಿಸಿಲ್ಲ. ಒಂದು ಒಪ್ಪತ್ತಿನ ಊಟಕ್ಕೆ ಕೂಡ ಪರದಾಡುವಂತಹ ಪರಿಸ್ಥಿತಿ ಬಂದುಬಿಟ್ಟಿದೆ. ನಾವು ಎಲ್ಲರೂ ಸಂಘಟಿತರಾಗಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್, ಬೇಡ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣಮಾರೆಪ್ಪ, ಎಸ್ಸಿ, ಎಸ್ಟಿ, ಅಲೆಮಾರಿ ಬುಡಕಟ್ಟು ರಾಜ್ಯ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮಂಜುನಾಥ್, ಹೆಳವ ಸಮಾಜದ ರಾಜ್ಯ ಮುಖಂಡ ಸುನೀಲ್ ಹೆಳವರ್, ಅಖಿಲ ಭಾರತ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಲೋಹಿತಾಕ್ಷ, ರಾಜ್ಯ ಕಾರ್ಯದರ್ಶಿ ಸಣ್ಣ ಅಜ್ಜಯ್ಯ, ಜಿಲ್ಲಾಧ್ಯಕ್ಷ ದೊಡ್ಡ ಯರ್ರಿಸ್ವಾಮಿ, ರಾಜ್ಯ ಉಪಾಧ್ಯಕ್ಷ ವೀರೇಶ್, ಸಿಂಧೋಳು ಸಮಾಜದ ಅಧ್ಯಕ್ಷ ಕರೆಪ್ಪ, ಸುಡುಗಾಡು ಸಿದ್ಧ ಸಮಾಜದ ಅಧ್ಯಕ್ಷ ರಾಮಾಂಜಿನಿ, ಹುಲಗಪ್ಪ ಕಂಪ್ಲಿ, ರಾಮಚಂದ್ರ ಸಿರುಗುಪ್ಪ, ಗಂಗಾಧರ, ಗೋವಿಂದಪ್ಪ, ರಂಗಯ್ಯ, ಆನಂದ್, ಹನುಮಂತಪ್ಪ, ಗಾದಿಲಿಂಗ ಮತ್ತಿತರರು ಹಾಜರಿದ್ದರು.
ಎಸ್ಸಿ, ಎಸ್ಟಿ, ಅಲೆಮಾರಿ ಸಮಾಜದ ವಿವಿಧ ಸಮುದಾಯಗಳ ಜನರು, ಪ್ರಮುಖರು, ಮುಖಂಡರು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.