ಮುಂದಿನ ಜನ್ಮ ಇದ್ದರೆ ವಾಲ್ಮೀಕಿ ಜನಾಂಗದಲ್ಲಿ ಜನಿಸುವೆ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಅ.17:
ಹಲವು ಜನ್ಮಗಳ ಪುಣ್ಯ ಇದ್ದವರು ವಾಲ್ಮೀಕಿ ಜನಾಂಗದಲ್ಲಿ ಜನಿಸಲು ಸಾಧ್ಯ, ನನಗೆ ಮುಂದಿನ ಜನ್ಮದಲ್ಲಿ ಮನುಷ್ಯನಾಗಿ ಜನಿಸಲು ಅವಕಾಶ ಸಿಕ್ಕರೆ ನಾನು ವಾಲ್ಮೀಕಿ ಜನಾಂಗದಲ್ಲಿ ಹುಟ್ಟುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಬ್ಯಾನರಿನಲ್ಲಿ ನಾಗೇಂದ್ರ ಅವರು ಮಾಜಿ ಸಚಿವರು ಎಂದು ಮುದ್ರಿಸಿದ್ದಾರೆ, ಆದರೆ ನಾಗೇಂದ್ರ ಅವರು ಯಾವತ್ತಿಗೂ ನಮಗೆ ಸಚಿವರೇ,
ಮುಂದಿನ ವಾಲ್ಮೀಕಿ ಜಯಂತಿ ವೇಳೆಗೆ ಅವರು ಮತ್ತೆ ಸಚಿವರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮಾಯಣದ ಆಂಜನೇಯ ಲಂಕೆಗೆ ಬೆಂಕಿ ಹಾಕಿದಂತೆ, ನಾಗೇಂದ್ರ ಅಣ್ಣ ಅವರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸುಡಲಿದ್ದಾರೆ ಎಂದ ಶಾಸಕ ನಾರಾ ಭರತ್ ರೆಡ್ಡಿ ಕೆಲವರು ಕುತಂತ್ರ ಮಾಡುವ ಮೂಲಕ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದರು.
ನಾಗೇಂದ್ರ ಅವರು ತಮ್ಮ ಸೋದರನ ಮಾತು ಕೇಳುತ್ತಾರೋ ಇಲ್ಲವೋ? ಗೊತ್ತಿಲ್ಲ. ಆದರೆ ನನ್ನ ಮಾತಿಗೆ ಅಷ್ಟು ಬೆಲೆ ನೀಡುತ್ತಾರೆ. ಹೀಗಾಗಿ ಅವರು ಎಲ್ಲೇ ಇರಲಿ, ಹೇಗೇ ಇರಲಿ ಅವರ ಜೊತೆ ನಾನು ನಿಲ್ಲುವೆ ಎಂದರು.
ಇಂದು ಕನಕ ದುರ್ಗಮ್ಮ ದೇವಸ್ಥಾನಕ್ಕೆ ಪೂಜೆಗೆ ಹೋದಾಗ ಆ ತಾಯಿಯಲ್ಲಿ ನಾನು ಬೇಡಿಕೊಂಡಿದ್ದೇನೆ; ನಾಗೇಂದ್ರ ಅಣ್ಣನವರು ಮತ್ತೆ ಸಚಿವರಾಗುವಂತೆ ಆಶೀರ್ವಾದ ಮಾಡು ತಾಯಿ ಎಂದು ಬೇಡಿಕೊಂಡಿದ್ದೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಹರ್ಷಿ ವಾಲ್ಮೀಕಿ ಅವರನ್ನು ಕೇವಲ ವರ್ಷಕ್ಕೊಮ್ಮೆ ಸ್ಥುತಿ ಮಾಡುವುದಲ್ಲ, ರಾಮಾಯಣ ಕೃತಿ ನೀಡಿದ ಮಹರ್ಷಿ ವಾಲ್ಮೀಕಿ ದೈವ ಸಮಾನರು, ನಾವು ಏಕಲವ್ಯನ ಹಾಗೆ ಕೆಲಸ ಮಾಡಬೇಕು ಎಂದರು.
ಹಲವು ಜನ್ಮದ ಪುಣ್ಯದ ಫಲವಾಗಿ ವಾಲ್ಮೀಕಿ ಜನಾಂಗದಲ್ಲಿ ಹುಟ್ಟಲು ಸಾಧ್ಯ, ನನಗೆ ಮುಂದಿನ ಜನ್ಮ ಎಂಬುದಿದ್ದರೆ ವಾಲ್ಮೀಕಿ ಸಮುದಾಯದಲ್ಲಿ ಜನಿಸುವೆ ಎಂದು ಅವರು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ 22 ವಾರ್ಡಿನ ಗಾಂಧಿ ನಗರ ಮಾರ್ಕೆಟ್ ಬಳಿ ವಾಲ್ಮೀಕಿ ಸಮುದಾಯದ ಮುಖಂಡರು ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸಕ್ಕೆ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು. ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ವಕ್ಫ್ ಮಂಡಳಿ ಅಧ್ಯಕ್ಷ ಹುಮಾಯೂನ್ ಖಾನ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಯಾದವ್, ಬಗರ್’ಹುಕುಂ ತಾಲೂಕು ಅಧ್ಯಕ್ಷ ತಿಮ್ಮನಗೌಡ, ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಎ.ಮಾನಯ್ಯ, ಭಂಭಂ ದಾದಾಭಾಯ್, ಪಾಲಿಕೆಯ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.