ವಿಠಲಾಪುರ ಅರಣ್ಯದಲ್ಲಿ ಕುರಿಗಳಿಗೆ ಮೇವು ಹಕ್ಕು ನೀಡಬೇಕು : ಕೊಳಗಲ್ ಅಂಜಿನಪ್ಪ ಆಗ್ರಹ
ಬಳ್ಳಾರಿ(28) ವಿಠಲಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಅನುಮತಿ ನೀಡಬೇಕೆಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಮುಖಂಡ ಕೊಳಗಲ್ ಅಂಜಿನಪ್ಪ ಅವರು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.
ಮಾತನಾಡಿದ ಅವರು, “ವಿಠಲಾಪುರದಲ್ಲಿ ಪ್ರತಿ ದಿನ 15,000ಕ್ಕೂ ಹೆಚ್ಚು ಕುರಿಗಳು ಅರಣ್ಯ ಪ್ರದೇಶದಲ್ಲಿ ಮೇವು ಹೊರುತ್ತಿವೆ. ಈ ಕುರಿ ಸಾಕಾಣಿಕೆಯಿಂದ 280ಕ್ಕೂ ಅಧಿಕ ಕುರಿಗಾಹಿಗಳ ಕುಟುಂಬಗಳು ನೇರವಾಗಿ ಅವಲಂಬಿತವಾಗಿವೆ. ಇದುವರೆಗೆ ಯಾವುದೇ ಅಡೆತಡೆಗಳಿಲ್ಲದೇ ಸಾಗಿದ್ದ ಕುರಿ ಸಾಕಾಣಿಕೆಗೆ ಇತ್ತೀಚೆಗೆ ಅರಣ್ಯ ಇಲಾಖೆ ತಡೆಗೋಡೆ ಹಾಗೂ ಮುಳ್ಳು ತಂತಿಗಳನ್ನು ಅಳವಡಿಸಿ ಅಡ್ಡಿಪಡಿಸುತ್ತಿದೆ. ಇದರಿಂದ ಕುರಿಗಳನ್ನು ಅರಣ್ಯ ಪ್ರದೇಶಕ್ಕೆ ದಾರಿಹಾಕಲು ಸಾಧ್ಯವಾಗದೆ, ಕುರಿಗಾಹಿಗಳ ಜೀವನ ಮಾರ್ಗ ತೀರಾ ಸಂಕಟಕ್ಕೆ ಒಳಗಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತ್ವರಿತಗತಿಯಲ್ಲೇ ಗಮನ ಹರಿಸಿ, ತಮ್ಮ ಶಿಷ್ಯ ಸಂಸದ ತುಕಾರಾಂ ಅವರ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿಯೂ, ಇದೇ ಸಮುದಾಯದ ಕುರಿಗಾಹಿಗಳ ಸಮಸ್ಯೆಗೆ ನಿರ್ಲಕ್ಷ್ಯ ವಹಿಸುತ್ತಿರುವುದು ದುರದೃಷ್ಟಕರ ಎಂದು ಅವರು ಟೀಕಿಸಿದರು. “ಕುರಿಗಳಿಗೆ ಮೇವು ಹೊರುವ ಹಕ್ಕು ಸಿಕ್ಕರೆ ಮಾತ್ರ ಗ್ರಾಮೀಣ ಭಾಗದ ನೂರುಾರು ಕುಟುಂಬಗಳು ಬದುಕುಳಿಯಲು ಸಾಧ್ಯ. ಇಲ್ಲದಿದ್ದರೆ ಅವರ ಜೀವನದ ಭವಿಷ್ಯ ಅಂಧಕಾರದಲ್ಲಿದೆ,” ಎಂದು ಕೊಳಗಲ್ ಅಂಜಿನಪ್ಪ ಹೇಳಿದರು.