ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಆ.28: ಅಂದಾಜು 300 ಕೋಟಿ ರೂ.ಗಳ ವೆಚ್ಚದಲ್ಲಿ ಬಳ್ಳಾರಿಯ ವಿಮಾನ ನಿಲ್ದಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಗುರುವಾರ ನವೀಕರಣಗೊಂಡ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚೆಗೆ ರಾಯದುರ್ಗಂ ಶಾಸಕರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ವೇಳೆ ವಿಮಾನ ನಿಲ್ದಾಣ ನಿರ್ಮಾಣವಾದರೆ ಈ ಭಾಗಕ್ಕೆ ಎಲ್ಲ ರೀತಿ ಅನುಕೂಲ ಆಗಲಿದೆ ಎಂದರು, ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ಕೈಗೊಂಡ ಕ್ರಮಗಳ ಬಗ್ಗೆ ಅವರೊಂದಿಗೆ ಚರ್ಚಿಸಿದೆ ಎಂದರು.
ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ನಾನು, ಮಾಜಿ ಸಚಿವ ಬಿ.ನಾಗೇಂದ್ರ, ಸಂಸದರಾದ ಡಾ.ಸಯ್ಯದ್ ನಾಸಿರ್ ಹುಸೇನ್ ಹಾಗೂ ತುಕಾರಾಂ ಅವರು ಬದ್ಧತೆಯನ್ನು ಹೊಂದಿದ್ದೇವೆ ಎಂದು ಹೇಳಿದ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ 300 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೂಲಭೂತ ಸೌಕರ್ಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದರು.
ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವ ರಾಂ ಮೋಹನ್ ನಾಯ್ಡು ಹಾಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಸಂಸದ ಡಾ.ಸಯ್ಯದ್ ನಾಸಿರ್ ಹುಸೇನ್, ರಾಹುಲ್ ಗಾಂಧಿಯವರ ಸಹಕಾರದೊಂದಿಗೆ ಮುನ್ನಡೆಯಲಾಗುವುದೆಂದರು.
ತಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿರುವ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಪ್ರಾಥಮಿಕ ಹಂತದಲ್ಲಿ 11 ಕೋಟಿ ರೂ.ಗಳ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದ್ದು, ಮಾರುಕಟ್ಟೆಯ ನಿರ್ಮಾಣದಿಂದ ಬೆಳೆಗಾರರಿಗೆ, ವ್ಯಾಪಾರಸ್ಥರಿಗೆ ಅನುಕೂಲ ಆಗಲಿದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ನ ಆಡಳಿತ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ನೀವು ಏನೇ ಬೇಡಿಕೆ ತಂದರೂ ಅದನ್ನು ಈಡೇರಿಸುವ ಪ್ರಯತ್ನ ಮಾಡುವೆ, ನಿಮ್ಮ ಸಹಕಾರವೂ ನನಗೆ ನಮ್ಮ ಪಕ್ಷಕ್ಕೆ ಇರಲಿ ಎಂದರು.
ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ನಗರದ ವಿವಿಧ ವ್ಯಾಪಾರೋದ್ಯಮ ಸಂಘ ಸಂಸ್ಥೆಗಳಿಂದ, ರೈತರಿಂದ ಶಾಸಕ ಸಂಸದರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್, ಸಂಸದರಾದ ಡಾ.ಸಯ್ಯದ್ ನಾಸಿರ್ ಹುಸೇನ್, ಈ.ತುಕಾರಾಂ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಯಶವಂತ ರಾಜ್ ನಾಗಿರೆಡ್ಡಿ, ಅವ್ವಾರು ಮಂಜುನಾಥ, ಕೆ.ಸಿ.ಸುರೇಶಬಾಬು, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಹಗರಿ ಗೋವಿಂದ, ಪಾಲಣ್ಣ ಮತ್ತಿತರರು ಹಾಜರಿದ್ದರು.