*ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನ ಕಲ್ಯಾಣವೇ ನಮ್ಮ ಸಂಘದ ಗುರಿ: ಇಬ್ರಾಹಿಂ ಬಾಬು*
ಬಳ್ಳಾರಿ,ನ.23: ಬಳ್ಳಾರಿ ತಾಲೂಕಿನ ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನ ಕಲ್ಯಾಣ ಮಾಡುವುದೇ ನಮ್ಮ ಗುರಿ ಎಅಅಂದು ನೂತನ ಬಳ್ಳಾರಿ ತಾಲೂಕು ಗಾರ್ಮೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ಸಿ.ಇಬ್ರಾಹಿಂ ಬಾಬು ಹೇಳಿದರು.
ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊರೋನಾ ಸಾಂಕ್ರಾಮಿಕ ವೇಳೆ ದೊಡ್ಡ ಸಂಖ್ಯೆಯ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು, ಸರ್ಕಾರ ಪರಿಹಾರದ ರೂಪದಲ್ಲಿ ಕಾರ್ಮಿಕ ಇಲಾಖೆ ಮೂಲಕ ಹಣ ನೀಡಿತು, ಆದರೆ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಪಡೆಯದ ಕಾರಣ ಕಾರ್ಮಿಕರಿಗೆ ಸವಲತ್ತು ಸಿಗಲಿಲ್ಲ, ಈ ವೇಳೆ ನಾವು ಗಾರ್ಮೆಂಟ್ಸ್ ಉದ್ಯಮದ ಕಾರ್ಮಿಕರ ಸಂಘಟನೆ ಮಾಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದೆವು ಎಂದು ಅವರು ಹೇಳಿದರು.
ಬಳ್ಳಾರಿ ತಾಲೂಕಿನಲ್ಲಿ ಅಂದಾಜು 3 ಸಾವಿರ ಜೀನ್ಸ್ ಘಟಕಗಳಿವೆ, ಅಂದಾಜು 35 ಸಾವಿರ ಕಾರ್ಮಿಕರಿದ್ದಾರೆ, ಇನ್ನು ಈ ಉದ್ಯಮದ ಮೇಲೆ ಅವಲಂಬಿತವಾಗಿರುವ ಇತರ ಕೆಲಸ ಕಾರ್ಯ ಮಾಡುವ ಅಂದಾಜು 75 ಸಾವಿರ ಜನರಿದ್ದಾರೆ, ಒಟ್ಟು ಅಂದಾಜು 1 ಲಕ್ಷ ಜನರು ಇಂದು ಜೀನ್ಸ್ ಉದ್ಯಮದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ, ಆದರೆ ಇವರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು ಹೇಳಿದ ಇಬ್ರಾಹಿಂಬಾಬು, ಅಸಂಘಟಿತವಾಗಿರುವ ಈ ಕಾರ್ಮಿಕರ ಸಂಘಟನೆ ಮಾಡುವ ಬಗ್ಗೆ ನಾವು ಸ್ನೇಹಿತರು ಸೇರಿ ಹಲವು ಸಭೆ ನಡೆಸಿ ತದ ನಂತರ ಸಂಘವನ್ನು ನೋಂದಣಿ ಮಾಡಿಸಿ, ಈಗಾಗಲೇ 400 ಜನ ಸದಸ್ಯತ್ವ ಪಡೆದಿದ್ದು, ದಿನಾಂಕ 24.11.2022 ರಂದು ನಮ್ಮ ಅಸೊಸಿಯೇಶನ್ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಹಲವು ಸವಲತ್ತುಗಳಿವೆ, ಕೆಲವರು ಅಕ್ರಮವಾಗಿ ಕಾರ್ಮಿಕ ಗುರುತಿನ ಚೀಟಿ ಪಡೆದಿರುವ ಬಗ್ಗೆ ಆರೋಪ ಇದೆ, ಆದರೆ ನಿಜವಾದ ಕಾರ್ಮಿಕರಿಗೆ ಸವಲತ್ತು ಸಿಗಬೇಕು, ಅವರ ಕಲ್ಯಾಣ ಆಗಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ಕಲ್ಯಾಣ ನಮ್ಮ ಮೊದಲ ಆದ್ಯತೆ, ಹೀಗಾಗಿ ಜೀನ್ಸ್, ಗಾರ್ಮೆಂಟ್ಸ್ ಕ್ಷೇತ್ರದಲ್ಲಿರುವ ಕಾರ್ಮಿಕರನ್ನು ಒಳಗೊಂಡು, ಅವರಿಗೆ ಗುರುತಿನ ಚೀಟಿ ನೀಡುವುದು ನಮ್ಮ ಮೊದಲ ಆದ್ಯತೆ ಎಂದ ಇಬ್ರಾಹಿಂ ಬಾಬು ವಿಧಾನಸಭಾ ಚುನಾವಣೆಗೂ ಸಂಘಟನೆ ಉದ್ಘಾಟನೆಗೂ ಸಂಬಂಧವಿಲ್ಲ, ನಮ್ಮ ಅಸೊಸಿಯೇಶನ್ ನಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದವರೂ ಪದಾಧಿಕಾರಿಗಳಿದ್ದಾರೆ ಎಂದರು.
ದಿ.24.11.2022 ಗುರುವಾರದಂದು ಬೆಳಿಗ್ಗೆ 10.30ಕ್ಕೆ ನಗರದ ಗ್ರ್ಯಾಂಡ್ ಫಂಕ್ಷನ್ ಹಾಲ್ ನಲ್ಲಿ ಅಸೋಸಿಯೇಶನ್‍ನ ಉದ್ಘಾಟನೆ ಹಾಗೂ ಪ್ರಥಮ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಹಮ್ಮದ್ ರಫೀಕ್, ಮೊಹಮ್ಮದ್ ಶಫಿ, ಸೋಮೇಶಿ, ಸೈಯದ್ ಮಸ್ತಾನ್ ವಲಿ, ಮೊಹಮ್ಮದ್ ಯೂಸುಫ್ ಸೇರಿದಂತೆ ಹಲವರು ಹಾಜರಿದ್ದರು.
*ಅಸೋಸಿಯೇಶನ್ ನ ಉದ್ಘಾಟನೆ ಮತ್ತು ಪ್ರಥಮ ಸಮಾವೇಶದ ವಿವರ*
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಬಿ.ಶ್ರೀರಾಮುಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಆಗಮಿಸಲಿದ್ದಾರೆ, ವಿಶೇಷ ಆಹ್ವಾನಿತರಾಗಿ ರಾಜ್ಯ ಕಾರ್ಮಿಕ ಆಯುಕ್ತ ಅಕ್ರಂ ಪಾಶಾ, ಬಳ್ಳಾರಿಯ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ್ ಬಂಕಾಡ್, ಜವಳಿ ಮತ್ತು ಕೈಮಗ್ಗ ಇಲಾಖೆಯ ಉತ್ತರ ವಲಯದ ಜಂಟಿ ನಿರ್ದೇಶಕ ವೀರೇಶ್ ದವಳಿ, ಉಪ ನಿರ್ದೇಶಕ ವಿಠಲ್ ರಾಜು, ಕಾರ್ಖಾನೆಗಳ ಹಿರಿಯ ಸಹಾಯಕ ವರುಣ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಿ.ಶ್ರೀನಿವಾಸ್ ರಾವ್, ಬಳ್ಳಾರಿ ಉತ್ಪಾದಕರ ಸಂಘದ ವಿನಾಯಕ ರಾವ್ ಅವರು ಭಾಗವಹಿಸಲಿದ್ದಾರೆ. ಅಸೋಸಿಯೇಶನ್ ನ ಅಧ್ಯಕ್ಷ ಸಿ.ಇಬ್ರಾಹಿಂ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಬಜಾರಪ್ಪ ವರದಿಗಾರರು .ಬಳ್ಳಾರಿ)