*ಕಾಂಗ್ರೆಸ್ ಐದು ಗ್ಯಾರಂಟಿ ಕೂಡಲೇ ಜಾರಿ ಮಾಡಲಿ : ಕರಿಯಪ್ಪ ಗುಡಿಮನೆ*
ಬಳ್ಳಾರಿ : ಒಳ ಮೀಸಲಾತಿ ಸೇರಿದಂತೆ ಕಾಂಗ್ರೆಸ್ ಕೊಟ್ಟಿರುವ ಐದು ಗ್ಯಾರಂಟಿಗಳನ್ನು ಕೂಡಲೇ ಜಾರಿ ಮಾಡಬೇಕು ಎಂದು ದಲಿತ ಮುಖಂಡ ಕರಿಯಪ್ಪ ಗುಡಿಯಪ್ಪ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ಆಶ್ವಾಸನೆ ನೀಡಿತ್ತು. ಈ ಕುರಿತು ಚಿತ್ರದುರ್ಗದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೂಡ ಕಾಂಗ್ರೆಸ್ ಘೋಷಣೆ ಮಾಡಿತ್ತು, ಹೀಗಾಗಿ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದರು.
ಸಾರ್ವಜನಿಕರಿಗೆ ಬೆಲೆ ಏರಿಕೆ, ಭ್ರಷ್ಟಾಚಾರದ, ಕೋಮಧ್ವೇಷದಿಂದ ಬೇಸತ್ತು ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳು ಕೂಡಲೇ ಜಾರಿ ಮಾಡಿ ಬಡವರಿಗೆ ಸರ್ಕಾರ ನೆರವಾಗಬೇಕು ಎಂದರು.
ಕಂಡರಿಯದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ದ್ವೇಷ ರಾಜಕಾರಣಕ್ಕೆ ಕುಖ್ಯಾತಿ ಪಡೆದಿದ್ದ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ವಿಜಯ ಕಾಂಗ್ರೆಸ್ ಪಕ್ಷದ ವಿಜಯ ಮಾತ್ರವಾಗಿರದೆ ಇಡೀ ನಾಡಿನ ಜನತೆಯ ವಿಜಯವಾಗಿದೆ. ಈ ಜನವಿರೋಧಿ ಆಡಳಿತವನ್ನು ಅಂತ್ಯಗೊಳಿಸಬೇಕೆಂದು ನಾಡಿನ ಎಲ್ಲಾ ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ತಳ ಸಮುದಾಯಗಳು, ಅಲ್ಪಸಂಖ್ಯಾತ, ದಲಿತ, ಆದಿವಾಸಿ, ಹಿಂದುಳಿದ ಜನ ಸಮುದಾಯಗಳ ಸಂಘ ಸಂಸ್ಥೆಗಳು ಅಪಾರ ಶ್ರಮವಹಿಸಿ ಕೆಲಸ ಮಾಡಿವೆ. ಈ ಪೈಕಿ ‘ಎದ್ದೇಳು ಕರ್ನಾಟಕ’ ಎಂಬ ಹೆಸರಿನಲ್ಲಿ ನಡೆದ ನಾಗರಿಕ ಸಮಾಜದ ಸಂಘಟಿತ ಪ್ರಯತ್ನ ವಿಶೇಷ ಪರಿಣಾಮವನ್ನು ಬೀರಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ 112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆಯಾಗಿ ಹೊರಹೊಮ್ಮಿದ ‘ಎದ್ದೇಳು ಕರ್ನಾಟಕ’ ತಳ ಸಮುದಾಯಗಳನ್ನು ಜಾಗೃತಗೊಳಿಸುವುದರಲ್ಲಿ ವಿಶೇಷ ಪಾತ್ರ ನಿರ್ವಹಿಸಿತು. ಒಟ್ಟು 103 ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಗುರುತಿಸಿ, ಅದರಲ್ಲಿ ಜಾತ್ಯಾತೀತ ಸಮುದಾಯಗಳ ಮತದಾನದ ಪ್ರಮಾಣವನ್ನು ಹೆಚ್ಚಿಸಲು, ಮತ ವಿಭಜನೆಯಾಗದಂತೆ ತಡೆಯಲು ವಿಶೇಷ ಪ್ರಯತ್ನ ಹಾಕಿ ಕೆಲಸ ಮಾಡಲಾಯಿತು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿ ಯಾರೆಂದು ಗುರುತಿಸಿ ಅವರಿಗೆ ಮಾತ್ರವೇ ಮತ ಹಾಕಿ ಎಂಬ ಕಾರ್ಯನೀತಿಯು ಬಿಜೆಪಿಯ ಸೋಲಿನಲ್ಲಿ ದೊಡ್ಡ ಪಾತ್ರ ನಿರ್ವಹಿಸಿತು.ಈ ನಿಟ್ಟಿನಲ್ಲಿ ಮೇ 26ರಂದು ರಾಜ್ಯಮಟ್ಡದ ಅಭಿನಂದನಾ ಸಮಾರಂಭ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.