ಮಿತ್ತಲ್ ಹಾಗೂ ಬ್ರಾಹ್ಮಿಣಿ ಸ್ಟೀಲ್ ಕಂಪನಿಗೆ ಸ್ವಾಧೀನ ಪಡಿಸಿಕೊಂಡ ಭೂ ಸಂತ್ರಸ್ಥರಿಗೆ ನ್ಯಾಯ ಒದಗಿಸಲು ಕೆಪಿಆರ್‍ಎಸ್ ಆಗ್ರಹ
ಬಳ್ಳಾರಿ : ಮಿತ್ತಲ್ ಹಾಗೂ ಬ್ರಾಹ್ಮಿಣಿ ಸ್ಟೀಲ್ ಕಂಪನಿಗಳಿಗೆ ಬಲವಂತವಾಗಿ ಸ್ವಾಧೀನಪಡಿಸಿಕೊಂಡಿರುವ ಭೂ ಸಂತ್ರಸ್ಥರಿಗೆ ನ್ಯಾಯ ಒದಗಿಸಲು ಮತ್ತು ಅಕ್ರಮ ತೊಲಗಿಸಲು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಆಗ್ರಹಿಸಿದೆ.
ಪತ್ರಿಕಾ ಭವನದಲ್ಲಿ ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜ ಅವರು, ಕೈಗಾರಿಕೆ ಸ್ಥಾಪಿಸುವುದಾಗಿ ಹೇಳಿ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದಕ್ಕಾಗಿ 3 ವರ್ಷದ ಅವಧಿ ನಿಗದಿಗೊಳಿಸಿದ್ದ ಸರ್ಕಾರ 13 ವರ್ಷ ಕಳೆದರೂ ಇಂದಿಗೂ ಕೈಗಾರಿಕೆ ಸ್ಥಾಪಿಸಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರಿಗೆ ಮಾಸಿಕ 25 ಸಾವಿರ ರೂ.ನಂತೆ ನಷ್ಟವಾಗಿದೆ. ಇದುವರೆಗೆ ಕುಟುಂಬವೊಂದಕ್ಕೆ ರೂ.60 ಲಕ್ಷ ದುಡಿಮೆ ನಷ್ಟವಾಗಿದೆ. ಕುಡಿತಿನಿ, ಹರಗಿನದೋಣಿ, ವೇಣಿವೀರಾಪುರ, ಜಾನೆಕುಂಟೆ, ಕೊಳಗಲ್ಲು, ಎರ್ರಂಗಳಿ, ಸಿದ್ಧಮ್ಮನಹಳ್ಳಿ ಗ್ರಾಮಗಳ ಪರಿಶಿಷ್ಟ ವರ್ಗದ ಹಾಗೂ ಜಾತಿಯ ದೇವದಾಸಿ ಮಹಿಳೆಯರ ಜಮೀನುಗಳನ್ನು ಕೂಡ ದೌರ್ಜನ್ಯವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದರೂ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.
ಹಲವಾರು ಗ್ರಾಮಗಳ ಸುಮಾರು 10 ಸಾವಿರ ಎಕರೆ ಪ್ರದೇಶ ಜಮೀನು ವಶಕ್ಕೆ ತೆಗೆದುಕೊಂಡಿರುವ ಕೈಗಾರಿಕೆಗಳ ಮಾಲೀಕರು ಅತ್ತ ಕೈಗಾರಿಕೆ ಸ್ಥಾಪನೆ ಮಾಡದೇ, ಇತ್ತ ಉದ್ಯೋಗಾವಕಾಶ ಒದಗಿಸದೇ ವಂಚಿಸಿದ್ದಾರೆ. 2010ರ ಅಕ್ಟೋಬರ್ 10ರಂದು ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಿತ್ತಲ್ ಸ್ಟೀಲ್ಸ್ ಗಾಗಿ ಕರೆದ ಸಭೆಯಲ್ಲಿ ಅಂದಿನ ಡಿಸಿ ಅವರು ಸೂಚಿಸಿದ ಬೆಲೆಯನ್ನು ರೈತರು ಧಿಕ್ಕರಿಸಿದ್ದರು. 2011ರ ಏಪ್ರಿಲ್ 11 ರಂದು ನಡೆದ ಸಭೆಯಲ್ಲೂ ರೈತರು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಇದುವರೆಗೆ ಜಮೀನು ಇಲ್ಲದೇ ರೈತರು ಅಕ್ರಮ ಭೂ ಬೆಲೆ ಮತ್ತು ದೌರ್ಜನ್ಯದಿಂದಾಗಿ 10 ಸಾವಿರ ಕೋಟಿ ರೂ.ಗಳ ಅಪಾರ ಮೊತ್ತದ ವಂಚನೆಗೆ ಒಳಗಾಗಿದ್ದಾರೆ. ಭೂ ಸ್ವಾಧೀನ ಮಾಡಿಕೊಂಡು 12 ವರ್ಷ ಕಳೆದರೂ ಕೈಗಾರಿಕೆ ಸ್ಥಾಪಿಸಲು ಸಂತ್ರಸ್ಥ ಕುಟುಂಬಗಳಿಗೆ ಉದ್ಯೋಗ ನೀಡದಿರುವುದು ವಂಚನೆಯಾಗಿದೆ. ಮಾಸಿಕ ಉದ್ಯೋಗ ಇಲ್ಲದೇ, ಪರಿಹಾರ ಇಲ್ಲದೇ ರೈತರು ಕಂಗಾಲಾಗಿದ್ದು ಕಾನೂನು ಬದ್ಧವಾಗಿಯೇ ತಮ್ಮ ಜಮೀನು ಪಡೆಯಲು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದ್ದಾರೆ ಎಂದರು.
ಈ ಕುರಿತಂತೆ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಶ್ರೀರಾಮುಲು ಅವರಿಗೂ ಮನವಿ ಪತ್ರ ನೀಡಿದ್ದೇವೆ. ರೈತರಿಗೆ ನ್ಯಾಯ ದೊರಕಿಸಿಕೊಡದೇ ಹೋದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಎಂದಿನಂತೆ ಕೃಷಿ ಕಾರ್ಯ ನಡೆಸಲು ಕಾನೂನಾತ್ಮಕವಾಗಿಯೇ ಮುಂದಾಗುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭೂ ಸಂತ್ರಸ್ಥರಾದ ಬಿ.ಬಸವನಗೌಡ, ಡಿ.ಸುರೇಶ್, ಕೃಷ್ಣಮೂರ್ತಿ, ಗವನೂರು ಅಂಜಿನಪ್ಪ, ಕೆ.ಜಂಗ್ಲಿಸಾಬ್, ಬಿ.ಸಂಪನ್ನ, ಎಂ.ವೆಂಕಟರಾಜ್, ದೊಡ್ಡಬಸಪ್ಪ, ಟಿ.ಲಕ್ಷ್ಮಣ, ಶೇಖರಪ್ಪ, ಶಂಕರಪ್ಪ ಇನ್ನಿತರರು ಇದ್ದರು.