ಪೊಲೀಸ್ ವಸತಿ ಗೃಹ ಕಟ್ಟಡ ನಿರ್ಮಾಣ; ಭೂಮಿ ಪೂಜೆ ನೆರವೇರಿಸಿದ ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಜು.16: ನಗರದ ಡಿಎಆರ್ ಆವರಣದಲ್ಲಿ ಬುಧವಾರ ಅಂದಾಜು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ; ಅಂದಾಜು 8 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಹಾಗೂ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿಯ ಐಜಿಪಿ ವರ್ತಿಕಾ ಕಟಿಯಾರ್, ಎಸ್ಪಿ ಡಾ. ಶೋಭಾ ರಾಣಿ, ಎಎಸ್ಪಿ ರವಿಕುಮಾರ್, ಡಿಎಸ್ಪಿ ನಂದಾರೆಡ್ಡಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ಹಗರಿ ಗೋವಿಂದ ಸೇರಿದಂತೆ ಮತ್ತಿತರರು ಇದ್ದರು.
*ಶೀಘ್ರದಲ್ಲೇ ಗಡಿಗಿ ಚೆನ್ನಪ್ಪ ವೃತ್ತ ಉದ್ಘಾಟನೆ:*
ಜನರು ಏನೇ ಒತ್ತಡ ಹಾಕಿದರೂ ಗಡಿಗಿ ಚನ್ನಪ್ಪ ವೃತ್ತವನ್ನು ಉತ್ತಮ ಗುಣಮಟ್ಟದಿಂದ ನಿರ್ಮಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಗಡಿಗಿ ಚೆನ್ನಪ್ಪ ವೃತ್ತದ ಉದ್ಘಾಟನೆ ತಡವಾಗಲು ಹಲವು ಕಾರಣಗಳಿವೆ, ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ, ಕೆಲ ಕಾಮಗಾರಿಗೆ ಸರ್ಕಾರದ ಅನಮೋದನೆ ವಿಳಂಬ ಆಗಿದೆ, ಆದ್ದರಿಂದ ಗಡಿಗಿ ಚನ್ನಪ್ಪ ವೃತ್ತ ಉದ್ಘಾಟನೆ ತಡವಾಗಿದೆ, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು, ಶಾಶ್ವತ ಕಾಮಗಾರಿ ಆಗಿರುವ ಕಾರಣ ಉತ್ತಮ ರೀತಿಯಲ್ಲೇ ಮಾಡಬೇಕಾಗಿದೆ, ಆದಷ್ಟು ಶೀಘ್ರದಲ್ಲೇ ವೃತ್ತವನ್ನು ಉದ್ಘಾಟನೆ ಮಾಡಲಾಗುವುದು ಎಂದರು.