This is the title of the web page
This is the title of the web page

Please assign a menu to the primary menu location under menu

State

ಬೀದಿ ಗೆ ಬಂದ ಗೌರವ ಕಲಾವಿದರು!!.ಸರ್ಕಾರ ಕೊಟ್ಟ ಗೌರವ ನೋಡಿ.

ಬೀದಿ ಗೆ ಬಂದ ಗೌರವ ಕಲಾವಿದರು!!.ಸರ್ಕಾರ ಕೊಟ್ಟ ಗೌರವ ನೋಡಿ.

*ಬೀದಿ ಗೆ ಬಂದ ಗೌರವ ಕಲಾವಿದರು!!.ಸರ್ಕಾರ ಕೊಟ್ಟ ಗೌರವ ನೋಡಿ.*

ಬಳ್ಳಾರಿ,ಮಾ.23, ಕನ್ನಡ ಮತ್ತು ಸಂ ಸ್ಕೃತಿ ಇಲಾಖೆಯ ಸೂಚನೆಯಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಮರ್ಪಕ ಹಣ ಲಭಿಸದೇ ಕೈಸುಟ್ಟುಕೊಂಡಿರುವ ಕಲಾವಿದರಿಗೆ ಅಗತ್ಯ ಧನ ನೀಡಬೇಕೆಂದು ಒತ್ತಾಯಿಸಿ ಇಂದು ಜಿಲ್ಲೆಯ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ವಿವಿಧ ಕಲಾವಿದರ ಸಂಘಗಳ ಪದಾಧಿಕಾರಿಗಳು ಅನ್ಯಾಯಕ್ಕೊಳಗಾಗಿರುವ ಜಿಲ್ಲೆಯ ಕಲಾವಿದರಿಗೆ ಬಾಕಿ ಇರುವ ಹಣ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ನಿರ್ದೇಶಕರಿಗೆ ಬರೆದ ಪತ್ರವನ್ನು ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಸಲ್ಲಿಸಿದ್ದಾರೆ.
ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಲ್ಲಿ ಆಗಿರುವ ಅನ್ಯಾಯ, ಅಕ್ರಮ ಹಾಗೂ ಪಕ್ಷಪಾತ ಧೋರಣೆ ಖಂಡಿಸಿ ಹೋರಾಟ ನಡೆಸಿದ ನೊಂದ ಕಲಾವಿದರ ಪರವಾಗಿ ಕೆ.ಜಗಧೀಶ್ ನೇತೃತ್ವದಲ್ಲಿ ಹಲವಾರು ಕಲಾವಿದರು ತಾರತಮ್ಯ ನೀತಿಯನ್ನು ಸರಿಪಡಿಸಿ, ಆರ್ಥಿಕವಾಗಿ ತೊಂದರೆಗೊಳಗಾಗಿರುವ ಕಲಾವಿದರಿಗೆ ಹಣ ನೀಡುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಭಿನಯ ಕಲಾ ಕೇಂದ್ರದ ಕೆ.ಜಗಧೀಶ್, ಇಲಾಖೆಯ ಸಂಘ-ಸಂಸ್ಥೆಗಳಿಗೆ ಧನ ಸಹಾಯ ಯೋಜನೆ 2022-23 ಅಡಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಹಲವಾರು ಅನ್ಯಾಯ, ಅಕ್ರಮ ಹಾಗೂ ಪಕ್ಷಪಾತದ ನಿರ್ಧಾರಗಳಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕಲಾವಿದರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಭ್ರಷ್ಟ ಅಧಿಕಾರಿಗಳ ಆಟಾಟೋಪಗಳಿಂದ ಕಲಾವಿದರು ಬೀದಿಗೆ ಬಿದ್ದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ಎಡಬಿಡಂಗಿತನ ನಿಲ್ಲಲಿ:

ಇಲಾಖೆಯ ಅಧಿಕಾರಿಗಳ ಎಡಬಿಡಂಗಿ ಕಾರ್ಯ ವೈಖರಿಯಿಂದ ಸರ್ಕಾರದ ಬಗ್ಗೆ ಕಲಾವಿದರೆಲ್ಲರೂ ಇದೀಗ ಅಸಮಾಧಾನಗೊಂಡಿದ್ದಾರೆ. ಕಲಾವಿದರನ್ನು ಗೋಳಿಗೀಡು ಮಾಡಿ, ತೊಂದರೆಯನ್ನುಂಟು ಮಾಡಿರುವ ಹುನ್ನಾರ ಇಲಾಖೆಯಿಂದಲೇ ನಡೆದಿದೆ.

ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದಿನ ಸಹಾಯಕ ನಿರ್ದೇಶಕರ ಲಂಚ ಬೇಡಿಕೆಯ ಧ್ವನಿಮುದ್ರಣ ಜಗಜ್ಜಾಹೀರಾಗಿದ್ದರೂ ಕೇವಲ 42 ದಿನಗಳಲ್ಲಿ ಅವರನ್ನು ಪುನಃ ಹಾವೇರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿರುವ ಕ್ರಮ ಎಷ್ಟು ಸರಿ? ಎಂದಿರುವ ಕೆ.ಜಗಧೀಶ್ ಅವರು, ಇಲಾಖೆಯ ಈ ಕ್ರಮ ಆಡಳಿತಕ್ಕೆ ಗರಿಮೂಡಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಓರ್ವ ವ್ಯಕ್ತಿಗೆ ನಾಲ್ಕು ಕಾರ್ಯಕ್ರಮ..!:

ಹೆಚ್. ಕರಿಬಸಪ್ಪ ಎಂಬ ಒಬ್ಬ ವ್ಯಕ್ತಿಗೆ ಬಳ್ಳಾರಿ ಮತ್ತು ಹಂಪಿ ಉತ್ಸವಗಳಲ್ಲಿ ನಾಲ್ಕು ವಿವಿಧ ಕಾರ್ಯಕ್ರಮ ನೀಡಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಇಲಾಖೆಯ ಮಾನ ತೆಗೆದ ಆ ಭ್ರಷ್ಟ ಅಧಿಕಾರಿಗೆ ಸರ್ಕಾರ ಮಣೆ ಹಾಕಿರುವುದು ಸರ್ಕಾರಕ್ಕೆ ಇಂಥವರ ಅವಶ್ಯಕತೆಯನ್ನು ಸಾರಿ ಹೇಳುತ್ತಿದೆ.

ಯಥಾ ರೀತಿಯ ನಿರ್ಲಕ್ಷ್ಯ ಮನೋಭಾವ ತ್ಯಜಿಸಿ, ಇನ್ನಾದರೂ ನೊಂದ ಕಲಾವಿದರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೆ.ಜಗಧೀಶ್ ಇಲಾಖೆಯ ನಿರ್ದೇಶಕರಲ್ಲಿ ಒತ್ತಾಯಿಸಿದ್ದಾರೆ.

ಪಾರದರ್ಶಕತೆ ಕುರಿತು ವ್ಯಂಗ್ಯ:

ಧನಸಹಾಯ ಯೋಜನೆಯ ಪ್ರಥಮ ಹಂತವಾದ ಆಯ್ಕೆ ಸಮಿತಿಯ ಸದಸ್ಯರ ನೇಮಕಾತಿಯಲ್ಲಿಯೇ ಇಲಾಖೆ ಎಡವಿದೆ. ಸದರಿ ಯೋಜನೆಯ ಅರ್ಜಿದಾರ ಫಲಾನುಭವಿಯನ್ನೇ ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನೇಮಿಸುವಾಗ ಪರಿಶೀಲನೆ ನಡೆಸಬೇಕು.

ಈ ಬಗ್ಗೆ ಶಿಫಾರಸ್ಸು ಮತ್ತು ಮಂಜೂರಾತಿಯ ಮಾನದಂಡವೇನೆಂಬುದನ್ನು ಬಳ್ಳಾರಿಯ ಕಚೇರಿಯಲ್ಲಿ ಬಾಯಿಬಿಡುತ್ತಿಲ್ಲವೆಂಬುದು ತಮ್ಮ ಇಲಾಖೆಯ ಪಾರರ್ಶಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬಳ್ಳಾರಿಯ ಈ ಹಿಂದಿನ ಭ್ರಷ್ಟ ಸಹಾಯಕ ನಿರ್ದೇಶಕರಿಗೆ ಬಲಗೈ ಬಂಟನಂತೆ ಕಚೇರಿಯ ವಾಹನದಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬರ ಸಂಸ್ಥೆಗೆ ಗರಿಷ್ಟ ಮೊತ್ತ ಮಂಜೂರಾಗಿರುವುದು ಕಲಾವಿದರಲ್ಲಿ ಚರ್ಚೆಯ ವಿಷಯವಾಗಿದೆ.

ಅವರಿಗೆ ನಾಲ್ಕು ಲಕ್ಷ, ನಮಗೆ 50 ಸಾವಿರ, ಒಂದು ಲಕ್ಷ ಮಂಜೂರು ಮಾಡಬೇಕಾದರೆ ಅನುಸರಿಸಿದ ಮಾನದಂಡವೇನೆಂಬುದನ್ನು ತನಿಖೆ ಮಾಡಿ ಬಹಿರಂಗಪಡಿಸಬೇಕು.

ಇಲಾಖೆಯ ಅಧಿಕಾರಿಗಳೂ ಇತರ ಕಲಾ-ಸಂಘಗಳಿಗೂ ಮಾರ್ಗದರ್ಶಿಗಳಾಗಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದಲ್ಲಿ ಇದನ್ನು ಸಹ ಅಕ್ರಮವೆಂದು ಭಾವಿಸಿ ನ್ಯಾಯಯುತ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಲಾವಿದರ ಜೀವನದೊಂದಿಗೆ ಚೆಲ್ಲಾಟ:

2022ರ ಡಿಸೆಂಬರ್ ಒಳಗಾಗಿ ‘ಕನಿಷ್ಟ ಮೂರು ಕಾರ್ಯಕ್ರಮ ಏರ್ಪಡಿಸಿರಿ’ ಎಂದು ಇಲಾಖೆ ಅಧಿಕಾರಿಗಳು ಫರ್ಮಾನು ಹೊರಡಿಸಿದ್ದರು. ಕೇವಲ ಒಂದು ತಿಂಗಳ ಅವಧಿಯಲ್ಲಿ ಅದು ಅಸಾಧ್ಯವೆಂದು ಬೆಂಗಳೂರಿನ ಕಲಾವಿದರು ಪ್ರತಿಭಟಿಸಿದಾಗ, ‘ಒಂದೇ ಕಾರ್ಯಕ್ರಮ ಮಾಡಿದರೂ ಧನಸಹಾಯಕ್ಕೆ ಅರ್ಹರು’ ಎಂದು ತಿದ್ದುಪಡಿ ಮಾಡಿದ್ದೀರಿ. ಆದರೆ ಈ ನಿರ್ಧಾರ ಪ್ರಕಟವಾಗುವುದರೊಳಗೆ ಅನೇಕರು ಮೂರು ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿದ್ದರು. ಮೊದಲು ಗರಿಷ್ಟ 2,50,000/- ರೂ. ಎಂದಿದ್ದೀರಿ. ನಂತರ ಗರಿಷ್ಟ 5 ಲಕ್ಷ ರೂ. ಎಂದು ಬದಲಾಯಿಸಿದ್ದೀರಿ. ಕಳೆದ ವರ್ಷದಂತೆ ಮುಂಗಡವಾಗಿ ಮಂಜೂರಾದ ಹಣವನ್ನು ಸಂಸ್ಥೆಗಳ ಖಾತೆಗಳಿಗೆ ಜಮೆ ಮಾಡುವ ವ್ಯವಸ್ಥೆಯನ್ನು ಕೈಬಿಟ್ಟರಿ. ಇನ್ನೂ ವಿಚಿತ್ರವೆಂದರೆ, ಎಷ್ಟು ಮಂಜೂರು ಮಾಡುತ್ತೇವೆಂಬುದನ್ನು ಹೇಳದೇ ಗುಟ್ಟಾಗಿಟ್ಟು, “ಮೊದಲು ಕಾರ್ಯಕ್ರಮ ಮಾಡಿ, ನಂತರ ಹಣ ಕೊಡುತ್ತೇವೆ” ಎಂದು ಅಸಹಾಯಕ ಕಲಾವಿದರ ಜೀವನಗಳ ಜೊತೆ ಚೆಲ್ಲಾಟವಾಡಿದಿರಿ. ಮಂಜೂರಾತಿಯನ್ನು ಗುಟ್ಟಾಗಿಡುವ ಉದ್ದೇಶವೇನಿತ್ತು? ಇದು ಪಾರದರ್ಶಕ ಆಡಳಿತವೇ? ಗುಟ್ಟಾಗಿಡುವ ಹಾಗಿದ್ದರೆ, ಮಠವೊಂದಕ್ಕೆ ಎರಡು ಕೋಟಿ, ಕನ್ನಡಪರ ಸಂಘಟನೆಗಳಿಗೆ ಕೋಟಿ ಕೋಟಿ ಹಣ ಮುಂಗಡವಾಗಿ ಮಂಜೂರು ಮಾಡಿ ಬಹಿರಂಗಪಡಿಸಿದಿರೇಕೆ? ಎಂದೂ ಕೆ.ಜಗಧೀಶ್ ಇಲಾಖೆಯ ಅಧಿಕಾರಿಗಳನ್ನು ಮನವಿ ಪತ್ರದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿರುವ ಕಲಾವಿದರು:

ಈ ಎಲ್ಲ ಗೊಂದಲಗಳ ನಡುವೆ, ಸಹಾಯಕ ನಿರ್ದೇಶಕರು ಕಲಾವಿದರ ಸಭೆಯಲ್ಲಿ ಹೇಳಿದ ಮಾತು ನಂಬಿ ಕಲಾ-ಸಂಸ್ಥೆಗಳು ಸಾಲ ಮಾಡಿ, ಬಂಗಾರ ಒತ್ತೆ ಇಟ್ಟು ಮೂರು ಕಾರ್ಯಕ್ರಮ ಮಾಡಿ ನಾಲೈದು ಲಕ್ಷ ರೂ. ವ್ಯಯಿಸಿದ್ದಾರೆ. ಆದರೆ ನಿನ್ನೆ ಮಂಜೂರಾತಿ ಆದೇಶ ನೋಡಿ, ‘ಅಜಗಜಾಂತರ ವ್ಯತ್ಯಾಸ ಕಂಡು ಕಲಾವಿದರು ತೀವ್ರ ಆಘಾತಗೊಂಡಿದ್ದಾರೆ. ಕಲಾಸೇವೆ’ ಮಾಡಲು ಹೋಗಿ ಕೈಸುಟ್ಟುಕೊಂಡವರ ಕಣ್ಣೀರ ಕಥೆ ನಿಮಗೆ ಅರ್ಥವಾಗುತ್ತದೆಯೇ? ನಾಲ್ಕು ಲಕ್ಷ ಖರ್ಚು ಮಾಡಿದವರಿಗೆ 50 ಸಾವಿರ, ಒಂದು ಲಕ್ಷ ಮಂಜೂರು ಮಾಡಿದ್ದೀರಿ, ಉಳಿದ ಮೂರು ಲಕ್ಷ ಸಾಲ ತೀರಿಸುವುದು ಹೇಗೆಂದು ದಾರಿ ಕಾಣದೇ ಸಾಲಗಾರರ ಕಾಟಕ್ಕೆ ಕಲಾವಿದರು. `ಜರ್ಜರಿತರಾಗಿದ್ದಾರೆ. ನೀವು ಮಾಡುವ ದುರಾಡಳಿತಕ್ಕೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನನಾಯಕರೇ ಎಲ್ಲಿದ್ದೀರಿ…?:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅವಾಂತರದಿಂದ ಕಲಾವಿದರು ಇಷ್ಟೆಲ್ಲ ತೊಂದರೆಗೊಳಗಾಗಿದ್ದರೂ ನಮ್ಮ ಜನನಾಯಕರು ಎಲ್ಲಿದ್ದಾರೆ? ಎಂದು ನೊಂದು ನುಡಿದಿರುವ ಕೆ.ಜಗಧೀಶ್ ಕಲಾವಿದರ ಹಿತಾಸಕ್ತಿ ನಿಮ್ಮಲ್ಲಿದ್ದರೆ ಇನ್ನಾದರೂ ಇತ್ತ ಕಡೆ ಗಮನಹರಿಸಿ. ಈಗ ಮಂಜೂರು ಮಾಡಿರುವ ಮೊತ್ತಗಳಲ್ಲಿನ ಅಗಾಧ ವ್ಯತ್ಯಾಸ ನೋಡಿದರೆ ಭ್ರಷ್ಟಾಚಾರದ ವಾಸನೆ ಇಲ್ಲಿ ರಾಚುತ್ತಿದೆ.

ಇಲಾಖೆಯ ಅಧಿಕಾರಿಗಳ ದ್ವಂದ್ವತೆಗಳು ಮತ್ತು ಗೊಂದಲಗಳ ನಿರ್ಣಯಗಳಿಂದ ‘ಹುಚ್ಚುಮಲ್ಲಿ ಮದುವೆಯಲ್ಲಿ ಉಂಡವನೇ ಜಾಣ ಎಂಬಂತಿದೆ ವ್ಯವಹಾರ. ಆದ್ದರಿಂದ ಇಲಾಖೆಯ ನಿರ್ದೇಶಕರು ತಕ್ಷಣವೇ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲ ಅರ್ಜಿಗಳು ಹಾಗೂ ಕಾರ್ಯಕ್ರಮಗಳ ದಾಖಲೆಗಳನ್ನು ನಿಖರವಾದ, ಪಾರದರ್ಶಕವಾದ ಹಾಗೂ ನಿಷ್ಪಕ್ಷಪಾತವಾದ ದೃಷ್ಟಿಯಿಂದ ಪುನರ್ ಪರಿಶೀಲಿಸಲೇಬೇಕು. ಸಂಸ್ಕೃತಿ ಇಲಾಖೆಯ ಮಂಜೂರಾತಿಯ ಮಾನದಂಡಗಳನ್ನು ನಿಗೂಢ ಆಸ್ತಿಯೆಂಬಂತೆ ಕತ್ತಲಲ್ಲಿಟ್ಟು, ಭ್ರಷ್ಟರಿಗೆ ಕುಮ್ಮಕ್ಕು ನೀಡದೇ, ಪಾರದರ್ಶಕವಾಗಿ ಬಹಿರಂಗಪಡಿಸಬೇಕು. ಇಲಾಖೆಯೆಂಬುದು ಕೇವಲ ಭ್ರಷ್ಟರ ಆಸ್ತಿಯಲ್ಲ. ಅದು ಸುಸಂಸ್ಕೃತರ ತಾಣವಾಗಬೇಕು. ಸಂಸ್ಕೃತಿ ಸಚಿವರ ತವರೂರಾದ ಕರಾವಳಿ ಪ್ರದೇಶ ಹಾಗೂ ಬೆಂಗಳೂರು ಭಾಗದ ಕಲಾ ಸಂಸ್ಥೆಗಳಿಗೆ ನೀಡಿರುವಂತೆ 5 ಲಕ್ಷದವರೆಗೆ ಗರಿಷ್ಟ ಮೊತ್ತವನ್ನು ನಮಗೂ ಮಂಜೂರು ಮಾಡಿ, ಇನ್ನೂ ಹೆಚ್ಚಿನ ಕಾರ್ಯಕ್ರಮ ಏರ್ಪಡಿಸಲು ತಾವು ಸಮಯಾವಕಾಶ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಅಕ್ರಮ ಬಯಲು ಮಾಡಲು ಕಲಾವಿದರೆಲ್ಲ ಸಜ್ಜು:

ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತ “ಕಲ್ಯಾಣ ಕರ್ನಾಟಕ’ ಭ್ರಷ್ಟರ ಕಲ್ಯಾಣಗುಣಗಳಿಂದ ಇನ್ನಷ್ಟು ಹಿಂದುಳಿಯುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನೀಡಿದ 3000 ಕೋಟಿ ರೂ. ಅನುದಾನದ ಸದ್ಧಳಕೆಯಾಗಬೇಕು. ಈ ವಿಷಯದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆಯ ನಿರ್ದೇಶಕರು ಎಂದಿನಂತೆ ಕಲಾವಿದರ ಮನವಿಯನ್ನು ಕಡೆಗಣಿಸಿ ತಾತ್ಸಾರ ತೋರಿದಲ್ಲಿ ಭ್ರಷ್ಟ ಆಡಳಿತದ ವಿರುದ್ಧ, ಲಂಚಕೋರ ಅಧಿಕಾರಿಗಳ ವಿರುದ್ಧ ಸೂಕ್ತ ಸಾಕ್ಷಾಧಾರಗಳ ಸಮೇತ ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದಿರುವ ಕೆ.ಜಗಧೀಶ್ ಗಂಭೀರವಾದ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಇಲಾಖೆಯ ಕರ್ಮಕಾಂಡಗಳನ್ನು ಬಯಲಿಗೆಳೆಯಲು ಎಲ್ಲ ಕಲಾವಿದರು ರಸ್ತೆಗೆ ಇಳಿದು ಹೋರಾಟ ಮಾಡಲು ಅಣಿಯಾಗಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

*ಆರೋಗ್ಯದ ಸಮಸ್ಯೆ ಇದೆ .ಆದರೆ ಕಲಾವಿದರಿಗೆ ಕಷ್ಟ ಗಳು ತಪ್ಪಲಲ್ಲಿ.ಮನವಿ ಪತ್ರಪಡೆಯುವ ಸಮಯದಲ್ಲಿ ಅಕಸ್ಮಾತ್ ಅಗಿ ಅಧಿಕಾರಿಗಳ ಪಾದ ಸ್ಪರ್ಶಿಸಿ ಮನವಿ ಮಾಡಿಕೊಂಡ ಘಟನೆ,ತಾಯಿ ಸಮಾನರು ತಾವು ಈರೀತಿ ಮಾಡಬಾರದು ಏಂದು ಮನವರಿಕೆ ಮಾಡಿದ ಅಧಿಕಾರಿ.*

8ನೇ ತರಗತಿಯಿಂದಲೇ ಕಲಾಗೀಳು ಹಚ್ಚಿಕೊಂಡಿದ್ದ ಜಿಲ್ಲೆಯ ಸುಜಾತಮ್ಮ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದವರು. ಇದುವರೆಗೆ 3 ಸಾವಿರಕ್ಕು ಅಧಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ತಮಗೆ ಆಗಿರುವ ಅನ್ಯಾಯ ಸರಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಬಾಬು ಅವರ ಕಾಲು ಅಕಸ್ಮಾತ್ ಅಗಿ ಮುಟ್ಟಿ ನಮಸ್ಕರಿಸಿದ್ದು ನೋಡಿದರೆ ಭ್ರಷ್ಟ ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ? ಎಂದು ಬೇಸರವಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಅಧಿಕಾರಿಯ ಕಾಲು ಮುಟ್ಟುವುದೆಂದರೆ ಏನರ್ಥ? ಅಡಳಿತ ಎಷ್ಟರಮಟ್ಟಿಗೆ ಇದೆ ಏಂದು ಆಲೋಚನೆ ಮಾಡುವ ವಾತಾವರಣ ಸೃಷ್ಟಿ ಅಗಿದೆ. ಮನವಿ ಪತ್ರ ಪಡೆಯುವ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಲಾಖೆಯ ಮೇಲೆ ಬೇಸರ ಗೊಂಡು ಕಣ್ಣೀರು ತುಂಬಿಸಿ ಕೊಂಡು ಪಾದಗಳನ್ನು ಮುಟ್ಟಿ ಕೊಂಡಿದ್ದು, ಅಧಿಕಾರಿ ಗಾಬರಿ ಗೊಂಡಿದ್ದರು.ತಾಯಿ ಸಮಾನರು ಈರೀತಿ ಮಾಡಬಾರದು ಏಂದರು.

ಜಿಲ್ಲೆಯ ಕಲಾವಿದರು ಇಂದು ಕಚೇರಿಗೆ ಆಗಮಿಸಿ ತಮ್ಮ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಅನ್ಯಾಯಕ್ಕೊಳಗಾಗಿರುವ ಕಲಾವಿದರ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ತಕ್ಷಣವೇ ಅನ್ಯಾಯ ಸರಿಪಡಿಸಿ ಕಲಾವಿದರಿಗೆ ನ್ಯಾಯ ದೊರಿಕಿಸಿಕೊಡುವ ಎಲ್ಲ ಪ್ರಯತ್ನಗಳನ್ನು ಇಲಾಖೆಯಿಂದಲೇ ಮಾಡುತ್ತೇವೆ,ಏಂದು ಅಧಿಕಾರಿ
ಸುರೇಶ್ ಬಾಬು
ಪ್ರಭಾರಿ ಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅವರು ತಿಳಿಸಿದ್ದಾರೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)


News 9 Today

Leave a Reply