ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಸೆ.13: ಬಳ್ಳಾರಿಯ 15ನೇ ವಾರ್ಡ್’ ಕಾಟೇಗುಡ್ಡದ ಬಹುದಿನಗಳ ಸಮಸ್ಯೆಯಾಗಿದ್ದ ಒಳ ಚರಂಡಿ ಸಮಸ್ಯೆ ಬಗೆ ಹರಿಯಲಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಗುರುವಾರ ಸಂಜೆ ಕಾಟೇಗುಡ್ಡ ಪ್ರದೇಶದ ಕೆ.ಸಿ.ರಸ್ತೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ (ಅಂದಾಜು 46 ಲಕ್ಷ ರೂ.ಗಳು) ಭೂಮಿ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದರು.
ಬಹಳ ದಿನಗಳಿಂದ ಬೀದಿ ದೀಪಗಳ ಸಮಸ್ಯೆಯಿದ್ದು, ತಕ್ಷಣ ಪರಿಹರಿಸಬೇಕೆಂದು ಕಾಟೇಗುಡ್ಡದ ನಿವಾಸಿಗಳು ಶಾಸಕರಿಗೆ ಮನವಿ ಮಾಡಿದರು. ಬೀದಿ ದೀಪಗಳನ್ನು ಅಳವಡಿಸುವಂತೆ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಅರ್ಹ ಫಲಾನುಭವಿಗಳ ನಿವಾಸದ ಹಕ್ಕು ಪತ್ರ ವಿತರಿಸಬೇಕೆಂದು ಸ್ಥಳೀಯರು ಮನವಿ ಮಾಡಿದರು.
ತದನಂತರ 6ನೇ ವಾರ್ಡಿನ ಬಳ್ಳಾರೆಪ್ಪ ಕಾಲೋನಿಯಲ್ಲಿ ಅಂದಾಜು ವೆಚ್ಚ 45 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಇದಕ್ಕೂ ಮುನ್ನ ನಗರದ ಮೋತಿ ವೃತ್ತ ಸಮೀಪದ ಗೌಳೇರ ಹಟ್ಟಿಯಲ್ಲಿ ಬೆಣಕಲ್ ಸೋದರರ ನೇತೃತ್ವದಲ್ಲಿ ಗಣೇಶ ಪೆಂಡಾಲ್’ನಲ್ಲಿ ಏರ್ಪಡಿಸಿದ್ದ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು. ಈ ವೇಳೆ ಶಾಸಕ ನಾರಾ ಭರತ್ ರೆಡ್ಡಿಯವರನ್ನು ಗೌಳೇರ ಹಟ್ಟಿಯ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಪದ್ಮರೋಜಾ, ಮಿಂಚು ಶ್ರೀನಿವಾಸ್, ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಬಿಆರೆಲ್ ಸೀನಾ, ಸುಬ್ಬರಾಯುಡು, ಶಿವರಾಜ, ಮುಂಡ್ಲೂರು ವಿವೇಕ್ ಮತ್ತಿತರರು ಹಾಜರಿದ್ದರು.