ಮಲ್ಲೇಶ್ವರನ ವೈಭವ. ಸಡಗರ ಸಂಭ್ರಮ ಹರಿದು ಬಂದ ಜನಸಾಗರ.
ಬಳ್ಳಾರಿ(1) ಶತಮಾನಗಳ ಐತಿಹಾಸಿಕತೆ ಮತ್ತು ಭಕ್ತಿಪರಂಪರೆಯನ್ನು ಒಳಗೊಂಡ ಬಳ್ಳಾರಿಯ ಆರಾಧ್ಯದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಭಕ್ತಿಭಾವ, ಸಂಭ್ರಮ ಮತ್ತು ಜನಪದ ಸಂಸ್ಕೃತಿಯ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಬಳ್ಳಾರಿ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಹತ್ತಿರದ ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ಕೋಟೆ ಮಲ್ಲೇಶ್ವರ ದೇವಸ್ಥಾನ ಹಾಗೂ ರಥೋತ್ಸವ ಮಾರ್ಗದೊಳಗೆ ಜಮಾಯಿಸಿ ತಮ್ಮ ಆರಾಧ್ಯ ದೈವನಿಗೆ ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದರು.
ರಥೋತ್ಸವದ ಆರಂಭದೊಂದಿಗೆ ಉತ್ಸವಕ್ಕೆ ಸಾಂಸ್ಕೃತಿಕ ರಂಗು ತುಂಬಿದ್ದು, ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯದ ತಂಡಗಳು ಹಾಗೂ ವಿವಿಧ ಜನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದ ಕಲಾವಿದರು ರಥೋತ್ಸವಕ್ಕೆ ವಿಶಿಷ್ಟ ಮೆರುಗು ನೀಡಿದರು. ವಾದ್ಯಗಳ ನಾದ, ಜನಪದ ನೃತ್ಯಗಳ ತಾಳಮೇಳ ಮತ್ತು ಭಕ್ತರ ಘೋಷಣೆಗಳು ಇಡೀ ಪ್ರದೇಶವನ್ನು ಭಕ್ತಿಮಯ ವಾತಾವರಣದಲ್ಲಿ ಮುಳುಗಿಸಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲ ವಯೋಮಾನದ ಜನರು ಅಪಾರ ಉತ್ಸಾಹದಿಂದ ರಥೋತ್ಸವದಲ್ಲಿ ಪಾಲ್ಗೊಂಡು, ರಥದಲ್ಲಿ ಪವಡಿಸಿದ್ದ ಪರಮಾತ್ಮನಿಗೆ ಬಾಳೆಹಣ್ಣು ಎಸೆದು ತಮ್ಮ ಹರಕೆಗಳನ್ನು ಸಲ್ಲಿಸಿದರು.
ಈ ಮಹೋತ್ಸವದಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ದೇವರ ದರ್ಶನ ಪಡೆದು ಭಕ್ತರೊಂದಿಗೆ ಸಂಭ್ರಮ ಹಂಚಿಕೊಂಡರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸಂದಣಿಯಿಂದ ರಥೋತ್ಸವ ಮಾರ್ಗಗಳಲ್ಲಿ ಕ್ಷಣ ಕ್ಷಣಕ್ಕೂ ಜನಸಾಗರವೇ ಕಾಣಿಸಿಕೊಂಡಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಂಡು ಸಂಚಾರ ನಿಯಂತ್ರಣದಲ್ಲಿ ತೊಡಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ಕೋಟೆ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ–ಪುನಸ್ಕಾರಗಳು, ಅಭಿಷೇಕಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ನಿರಂತರವಾಗಿ ನಡೆದಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ಮತ್ತಷ್ಟು ಹೆಚ್ಚಿಸಿದೆ. ಸಮುದಾಯದ ಒಗ್ಗಟ್ಟು, ಜನಪದ ಸಂಸ್ಕೃತಿ ಮತ್ತು ಭಕ್ತಿಭಾವದ ಅನನ್ಯ ಸಂಗಮವಾಗಿ ಕೋಟೆ ಮಲ್ಲೇಶ್ವರ ಜಾತ್ರಾ ಮಹೋತ್ಸವವು ಈ ಬಾರಿ ಕೂಡ ಬಳ್ಳಾರಿಯ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮಹತ್ವದ ಆಚರಣೆಯಾಗಿ ಮೂಡಿಬಂದಿದೆ. ಮಲ್ಲೇಶ್ವರನ ವೈಭವ, ಸಡಗರ ಸಂಭ್ರಮ, ಹರಿದು ಬಂದ ಜನಸಾಗರ.