
ಬಳ್ಳಾರಿ, ಏ.22: ಈ ಸಲ ಕೇವಲ ಶಿಷ್ಟಾಚಾರಕ್ಕೆ ಕಟ್ಟು ಬೀಳದೆ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಖಾಸಗಿ ಹೊಟೇಲಿನಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಸವ ಜಯಂತಿಯ ಆಚರಣೆಗೆ ಬೇಕಾಗುವ ಎಲ್ಲ ಅನುಕೂಲಗಳನ್ನು ನಾನು ಮಾಡಿ ಕೊಡುವೆ, ಶಿಷ್ಟಾಚಾರದ ಬಗ್ಗೆ ಯಾವುದೇ ಆಲೋಚನೆ ಬೇಡ, ಸಮಾಜದ ಜನರ ಸಹಕಾರದೊಂದಿಗೆ ಅದ್ಧೂರಿ ಜಯಂತಿ ಆಚರಿಸೋಣ ಎಂದರು.
ಈವರೆಗೆ ಹಿಂದೆಂದೂ ಆಗದ ರೀತಿಯಲ್ಲಿ ಐತಿಹಾಸಿಕ ಜಯಂತಿಯ ಆಚರಣೆ ಈ ಸಲ ಆಗಬೇಕು ಎಂದ ಅವರು, ವೀರಶೈವ ಲಿಂಗಾಯತ ಸಮುದಾಯದ ಜನರ ಐಕ್ಯತೆಯ ಪ್ರದರ್ಶನ ಆಗುವ ರೀತಿಯಲ್ಲಿ ಜಯಂತಿ ಆಚರಿಸುವಂತಾಗಬೇಕೆಂದರು.
ಜಯಂಅಂತಿಯಲ್ಲಿ ಎಲ್ಲರೂ ಭಾಗಿಯಾಗಬೇಕು, ಜಯಂತಿ ಆಚರಣೆಯಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ, ಬಸವಣ್ಣ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದೆ ಇದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದ್ದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಸರ್ಕಾರಿ ಕಾರ್ಯಕ್ರಮದ ಜೊತೆಗೆ ಸಮಾಜದ ವತಿಯಿಂದ ಕೂಡ ಅದ್ಧೂರಿಯಾಗಿ ಜಯಂತಿ ನಡೆಯಬೇಕು, ಆ ರೀತಿಯಲ್ಲಿ ಜಯಂತಿಯನ್ನು ಯೋಜಿಸೋಣ ಎಂದರು.
ಒಂದೂವರೆ ಕೋಟಿ ರೂ.ಗಳ ಅನುದಾನದಲ್ಲಿ ಅಶ್ವಾರೂಢ ಬಸವಣ್ಣ ಪುತ್ಥಳಿ ಸ್ಥಾಪನೆ ಮಾಡಲಾಗುವುದು, ಈಗಿನ ಕೆಇಬಿ ವೃತ್ತದ ಬಳಿ ಪುತ್ಥಳಿ ಸ್ಥಾಪನೆ ಆಗಲಿದೆ, ಇದಕ್ಕಾಗಿ ಜಾಗ ನೀಡಿರುವ ಗಡಿಗಿ ಕುಟುಂಬದವರನ್ನು ಅಭಿನಂದಿಸುವೆ ಎಂದರು.
ಈ ಸಂದರ್ಭ ಕಮ್ಮರಚೇಡು ಸಂಸ್ಥಾನ ಕಲ್ಯಾಣಸ್ವಾಮಿ, ಹರಗಿನಡೋಣಿ ಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಿದ್ದರು.
ಅಲ್ಲಮ ಪ್ರಶಾಂತ್, ದಂಡಿನ್ ಶಿವಾನಂದ, ಚೋರನೂರು ಕೊಟ್ರಪ್ಪ, ಕೋರಿ ವಿರೂಪಾಕ್ಷಪ್ಪ , ಕೇರನಹಳ್ಳಿ ಚಂದ್ರಶೇಖರ್, ನರೇಂದ್ರಬಾಬು, ವೀರೇಶ್ ಗೌಡ ವಕೀಲ, ಪನ್ನರಾಜ, ಟಿ.ಎಚ್.ಎಂ. ಗುರು ಬಸವರಾಜ್, ಜಾನೆಕುಂಟೆ ಸಣ್ಣ ಬಸವರಾಜ್, ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಚಾನಾಳ ಶೇಖರ್, ಕೆಎನ್ಎಂ ಅಭಿಲಾಶ್, ತಿಮ್ಮನಗೌಡ, ಸಂಗನಕಲ್ಲು ಬಸವರಾಜ್, ಯಾಳ್ಪಿ ಪಂಪನಗೌಡ, ಡಾ.ಮಹಿಪಾಲ್, ಮಲ್ಲನಗೌಡ, ನಿಷ್ಟಿ ರುದ್ರಪ್ಪ, ಅಸುಂಡಿ ನಾಗರಾಜ್, ಮೀನಳ್ಳಿ ಚಂದ್ರಶೇಖರ್, ಜೆ.ಎಂ.ಬಸವರಾಜ್ ಸ್ವಾಮಿ ಹಾಗೂ ರಾಷ್ಟ್ರೀಯ ಬಸವ ದಳದವರು, ವೀರಶೈವ ಲಿಂಗಾಯತ ಸಮಾಜದ ಹಲವು ಮುಖಂಡರು ಹಾಜರಿದ್ದು ಜಯಂತಿ ಯಶಸ್ವಿಗೊಳಿಸಲು ಸಲಹೆ ನೀಡಿದರು.