This is the title of the web page
This is the title of the web page

Please assign a menu to the primary menu location under menu

State

ಅಪಘಾತ ತಡೆ, ಸಂಚಾರಿ ನಿಯಮ ಉಲ್ಲಂಘನೆಗೆ ಆಧುನಿಕ ಉಪಕರಣ ಬಳಕೆ: ಎಸ್‍ಪಿ ರಂಜಿತ್ ಕುಮಾರ್ ಬಂಡಾರು

ಅಪಘಾತ ತಡೆ, ಸಂಚಾರಿ ನಿಯಮ ಉಲ್ಲಂಘನೆಗೆ ಆಧುನಿಕ ಉಪಕರಣ ಬಳಕೆ: ಎಸ್‍ಪಿ ರಂಜಿತ್ ಕುಮಾರ್ ಬಂಡಾರು

*ಅಪಘಾತ ತಡೆ, ಸಂಚಾರಿ ನಿಯಮ ಉಲ್ಲಂಘನೆಗೆ ಆಧುನಿಕ ಉಪಕರಣ ಬಳಕೆ: ಎಸ್‍ಪಿ ರಂಜಿತ್ ಕುಮಾರ್ ಬಂಡಾರು*
ಬಳ್ಳಾರಿ,ಜೂ.(25)
ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ, ಅಪಘಾತ ನಿಯಂತ್ರಣ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿ ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತಕ ವರ್ಷದಿಂದ ಇಲ್ಲಿಯವರೆಗೆ ಸುಮಾರು 300 ರಸ್ತೆ ಅಪಘಾತಗಳು ಸಂಭವಿಸಿದ್ದು, 118 ಜನ ಮೃತಪಟ್ಟಿದ್ದಾರೆ. 436 ಗಂಭೀರ ಸ್ವರೂಪದ ಗಾಯಗಳಾಗಿವೆ. ಹಾಗಾಗಿ ಜಿಲ್ಲೆಯಲ್ಲಿ ರಸ್ತೆ ಅಪಘಾತ ನಿಯಂತ್ರಿಸಲು, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
ಸಂಚಾರಿ ನಿಯಮ ಉಲ್ಲಂಘನೆಗೆ ಸ್ಪೀಡ್ ಲೇಸರ್ ಗನ್ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬ್ರೀಥ್ ಅಲ್ಕೋಹಾಲ್ ಅನಲೈಜರ್ ಸಾಧನಗಳು ಸಿಟಿಆರ್‍ಎಸ್ ಕಚೇರಿಯಿಂದ ಸರಬರಾಜು ಆಗಿದ್ದು, ಇವುಗಳ ಬಗ್ಗೆ ಈಗಾಗಲೇ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
*ಸ್ಪೀಡ್ ಲೇಸರ್ ಗನ್:*
ಸ್ಪೀಡ್ ಲೇಸರ್ ಗನ್ ಉಪಕರಣವು ಸಂಪೂರ್ಣ ಡಿಜಿಟಲ್ ಆಗಿದ್ದು, ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆಯಾದಲ್ಲಿ ಅಂದಿನ ದಿನಾಂಕ, ಪ್ರಿಂಟ್ ದಿನಾಂಕ, ಸೌಂಡ್ ಡೆಸಿಬಲ್ ಮಾಹಿತಿ, ಸ್ಥಳ ಹಾಗೂ ವಾಹನದ ನೋಂದಣಿ ಸಂಖ್ಯೆ ಸೇರಿ ಸ್ವಯಂಚಾಲಿತವಾಗಿ ಈ ಉಪಕರಣವು ರೆಕಾರ್ಡ್ ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ಈ ಉಪಕರಣವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಬಹುದಾದ ಸಾಧನವಾಗಿದ್ದು, ಅಪಾಯಕಾರಿ ಚಾಲನೆ, ಅತಿ ವೇಗ, ಚಾಲನೆ ಮಾಡುವಾಗ ಮೊಬೈಲ್ ಬಳಕೆ, ವೀಲಿಂಗ್ ಮತ್ತು ರೇಸಿಂಗ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ದ್ವಿ-ಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರ ಚಾಲನೆ, ಸಿಗ್ನಲ್ ಜಂಪಿಗ್ ಮತ್ತು ಮಾದಕ ದ್ರವ್ಯದ ಅಮಲಿನಲ್ಲಿ ವಾಹನ ಚಾಲನೆ ಸೇರಿದಂತೆ ಇನ್ನು ಮುಂತಾದ ಸಂಚಾರ ನಿಯಮ ಉಲ್ಲಂಘನೆ ಗುರುತಿಸಿ ಪ್ರಕರಣ ದಾಖಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ವಾಹನ ಸವಾರರು ಅನಾವಶ್ಯಕವಾಗಿ ಪೊಲೀಸರೊಂದಿಗೆ ವಾಗ್ವಾದ ಮಾಡುವುದನ್ನು ತಪ್ಪಿಸಲು ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸಾಕ್ಷ್ಯಧಾರಗಳನ್ನು ಸಂಗ್ರಹಿಸುತ್ತದೆ ಎಂದರು.
ಜಿಲ್ಲಾ ಪೊಲೀಸ್ ಇಲಾಖೆಯು ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ವಾಹನ ಚಾಲನೆ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ತಪ್ಪದೇ ಧರಿಸಬೇಕು ಎಂದು ತಿಳಿಸಿದರು.
*ಬ್ರೀಥ್ ಅಲ್ಕೋಹಾಲ್ ಅನಲೈಜರ್:*
ಜಿಲ್ಲೆಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಬ್ರೀಥ್ ಅಲ್ಕೋಹಾಲ್ ಅನಲೈಜರ್ ಡಿಜಿಟಲ್ ಉಪಕರಣವನ್ನು ಬಳಸಲಾಗುತ್ತಿದ್ದು, ಮದ್ಯ ಸೇವನೆ ಮಾಡಿದ ವ್ಯಕ್ತಿಯ ಭಾವಚಿತ್ರದ ಸಮೇತ ಮಾಹಿತಿ ದಾಖಲಾಗುತ್ತದೆ. ಈ ಉಪಕರಣವನ್ನು ಊದಿಸುವುದರ ಮೂಲಕ, ವಾಸನೆ ಮೂಲಕ ಮತ್ತು ನಿರಾಕರಿಸಿದಾಗ ಈ ಮೂರು ರೀತಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‍ಪಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದರು.
*ತುರ್ತು ಸೇವೆಗಳಿಗೆ 112 ಗೆ ಕರೆಮಾಡಿ:*
ಸಾರ್ವಜನಿಕರು ಯಾವುದೇ ದೌರ್ಜನ್ಯ, ಗಲಾಟೆ, ಹಲ್ಲೆ, ದೊಂಬಿ, ಕಳ್ಳತನ, ರಸ್ತೆ ಅಪಘಾತ ಹಾಗೂ ಇತರೆ ತುರ್ತು ಸೇವೆಗಳಿಗೆ 112 (ಇಆರ್‍ಎಸ್‍ಎಸ್) ಸಂಖ್ಯೆಗೆ ಕರೆ ಮಾಡಿದರೆ ಪೊಲೀಸ್ ಸೇವೆ ಪಡೆಯಬಹುದಾಗಿದೆ. 24*7 ತುರ್ತು ಪ್ರತಿಕ್ರಿಯೆ ಸೇವೆ ಲಭ್ಯವಿದ್ದು, ದೂರುದಾರರು ಕರೆ ಮಾಡಿದ 15 ನಿಮಿಷಗಳೊಳಗಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಎಸ್ಪಿ ಅವರು ಹೇಳಿದರು.
ಸಂಚಾರಿ ಪೊಲೀಸ್ ಠಾಣೆಯ ಪಿಐ ಅಯ್ಯನಗೌಡ ಪಾಟೀಲ್ ಅವರು ಸ್ಪೀಡ್ ಲೇಸರ್ ಗನ್, ಬ್ರೀಥ್ ಅಲ್ಕೋಹಾಲ್ ಅನಲೈಜರ್ ಉಪಕರಣಗಳ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಡಿಎಆರ್‍ನ ಡಿಎಸ್‍ಪಿ ಬಿ.ತಿಪ್ಪೇಸ್ವಾಮಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.


News 9 Today

Leave a Reply