ಬಳ್ಳಾರಿಯಲ್ಲಿ ಬೇಕರಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ: ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆ!
ಬಳ್ಳಾರಿ (ಸೆ. 23): ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ನಗರದ ವಿವಿಧ ಬೇಕರಿಗಳ ಮೇಲೆ ಆಹಾರ ಸುರಕ್ಷತೆ ಹಾಗೂ ಔಷಧಿ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಸಿಬ್ಬಂದಿ ಜಂಟಿಯಾಗಿ ದಿಢೀರ್ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಹಲವು ಬೇಕರಿಗಳಲ್ಲಿ ಅವಧಿ ಮೀರಿದ (ಎಕ್ಸ್ಪೈರಿ ದಿನಾಂಕ ಮುಗಿದ) ಹಾಗೂ ಕಳಪೆ ಮಟ್ಟದ ಆಹಾರ ಪದಾರ್ಥಗಳು ಮಾರಾಟಕ್ಕಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ಕೆಲ ಬೇಕರಿಗಳ ಅನುಮತಿ ಪತ್ರ (ಪರವಾನಗಿ)ಗಳ ಸಿಂಧುತ್ವದ ಮೇಲೆಯೂ ಅನುಮಾನಗಳು ವ್ಯಕ್ತವಾಗಿವೆ.
ಸಂದೇಹಾಸ್ಪದವಾಗಿ ಕಂಡುಬಂದ ಆಹಾರ ಪದಾರ್ಥಗಳ ಮಾದರಿಗಳನ್ನು (ಸ್ಯಾಂಪಲ್ಸ್) ಸಂಗ್ರಹಿಸಿರುವ ಅಧಿಕಾರಿಗಳು, ಅವುಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಯೋಗಾಲಯದ ವರದಿ ಬಂದ ಬಳಿಕ ನಿಯಮಾನುಸಾರ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ಮತ್ತು ಲೋಪಗಳು:
* ಹೆರಿಟೇಜ್ ಕೇಕ್ಸ್: ಕೃಷಿಕ ಸಮಾಜದ ಮಳಿಗೆಯಲ್ಲಿರುವ ‘ಹೆರಿಟೇಜ್ ಕೇಕ್ಸ್’ ಮೇಲೆ ದಾಳಿ ನಡೆಸಿದಾಗ, ಪ್ರತಿಷ್ಠಿತ ಕಂಪನಿಗಳ ಅವಧಿ ಮುಗಿದ ತಂಪು ಪಾನೀಯಗಳು, ಬಿಸ್ಕೆಟ್ಸ್ ಹಾಗೂಆಹಾರ ಪದಾರ್ಥಗಳು ಬಳಕೆಗೆ ಯೋಗ್ಯವಿಲ್ಲದೆ ಇರುವದು ಕಂಡುಬಂದಿದೆ. ಸ್ಥಳದಲ್ಲಿ ಗಬ್ಬು ವಾಸನೆ ಬರುತ್ತಿದ್ದು, ವಿಷಯುಕ್ತ ವಾತಾವರಣ ಸೃಷ್ಟಿಯಾಗಿತ್ತು.
* ರೇಣುಕಾ ಬೇಕರಿ: ದುರ್ಗಮ್ಮ ಗುಡಿ ಹತ್ತಿರವಿರುವ ‘ರೇಣುಕಾ ಬೇಕರಿ’ಯ ತಯಾರಿಕಾ ಘಟಕದಲ್ಲಿ ಸಿಬ್ಬಂದಿ ಯಾವುದೇ ಕೈಗವಸು (ಹ್ಯಾಂಡ್ ಗ್ಲೌಸ್) ಧರಿಸದೆ, ಸಂಪೂರ್ಣ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಮಾಲೀಕರಿಗೆ ತಕ್ಷಣವೇ ಎಚ್ಚರಿಕೆ ನೀಡಿ, ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.
* ಪ್ಯಾಕಿಂಗ್ ನಿಯಮ ಉಲ್ಲಂಘನೆ: ಎರಡೂ ಬೇಕರಿಗಳಲ್ಲಿ ಮಾರಾಟಕ್ಕಿಡಲಾಗಿದ್ದ ಚಿಪ್ಸ್, ಚಕ್ಲಿ, ಅತ್ತಿರಸಾ,ಹಾಗೂ ಸಿಹಿ ಪದಾರ್ಥಗಳ ಮೇಲೆ ತಯಾರಿಸಿದ ದಿನಾಂಕ, ವಿಳಾಸ ಅಥವಾ ಉತ್ಪಾದಕರ ಹೆಸರು ಇರಲಿಲ್ಲ. ಎಫ್.ಎಸ್.ಎಸ್.ಎ.ಐ. (FSSAI) ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
* ವಾಣಿಜ್ಯೇತರ ಗ್ಯಾಸ್ ಬಳಕೆ:
ಬೇಕರಿಗಳಲ್ಲಿ ವಾಣಿಜ್ಯ ಬಳಕೆಯ ಬದಲು ಗೃಹಬಳಕೆಯ (ಡೊಮೆಸ್ಟಿಕ್) ಗ್ಯಾಸ್ ಸಿಲಿಂಡರ್ಗಳನ್ನು ಅಕ್ರಮವಾಗಿ ಮತ್ತು ವಿಪರೀತವಾಗಿ ಬಳಸುತ್ತಿರುವುದು ಕಂಡುಬಂದಿದೆ.
ಮಾಲೀಕರ ಸ್ಪಷ್ಟನೆ:- ಹಾಗೂ ಸಾರ್ವಜನಿಕರ ಆಕ್ರೋಶ:
ಘಟನೆ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಹೆರಿಟೇಜ್ ಬೇಕರಿ ಮಾಲೀಕರು, “ನಮ್ಮಲ್ಲಿ ಎಲ್ಲಾ ದಾಖಲೆಗಳು ಸರಿಯಾಗಿವೆ. ಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಹೊಸಪೇಟೆ ಹಾಗೂ ಬಳ್ಳಾರಿಯ ಹಲವೆಡೆ ನಮ್ಮ ಶಾಖೆಗಳಿದ್ದು, ಎಲ್ಲೂ ಇಂತಹ ಘಟನೆ ನಡೆದಿಲ್ಲ” ಎಂದು ಸಮರ್ಥಿಸಿಕೊಂಡು, ಭಗವದ್ಗೀತೆಯ ಶ್ಲೋಕ ಗಳನ್ನು ಉಲ್ಲೇಖಿಸಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಗಾದೆಪ್ಪನವರೇ ಅಧ್ಯಕ್ಷರಾಗಿರುವ ಕೃಷಿಕ ಸಮಾಜದ ಮಳಿಗೆಯಲ್ಲೇ ಇಂತಹ ಕಳಪೆ ಆಹಾರ ಮಾರಾಟವಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ, ಆಹಾರ ಸರಬರಾಜು ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ ಎಂದು ವಿವಿಧ ಸಂಘ-ಸಂಸ್ಥೆಗಳ ಹೋರಾಟಗಾರರು ಆರೋಪಿಸಿದ್ದು, ಕಳಪೆ ಆಹಾರದಿಂದ ಜನರ ಆರೋಗ್ಯ ಹಾಳಾಗುತ್ತಿರುವುದನ್ನು ತಡೆಯಲು ನಗರದ ಎಲ್ಲಾ ಬೇಕರಿ ಹಾಗೂ ಹೋಟೆಲ್ಗಳ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.














