ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೌಚಾಲಯದ ಮುಂದೆ ಮತ್ತೊಂದು ಶೌಚಾಲಯ ನಿರ್ಮಾಣ!
ಸಾರ್ವಜನಿಕರ ತೆರಿಗೆ ಹಣ ಪೋಲು; ಅಧಿಕಾರಿಗಳ ಕಾರ್ಯವೈಖರಿಗೆ ವ್ಯಾಪಕ ಆಕ್ರೋಶ
ಬಳ್ಳಾರಿ (7)ನಗರದ ಪ್ರಮುಖ ವ್ಯಾಪಾರ ಕೇಂದ್ರಗಳು ಹಾಗೂ ಮಾರುಕಟ್ಟೆ ಪ್ರದೇಶಗಳಿಗೆ ಆಗಮಿಸುವ ಸಾರ್ವಜನಿಕರು, ರೈತರು ಮತ್ತು ವ್ಯಾಪಾರಿಗಳಿಗೆ ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಪರಿಣಾಮವಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಸೂಕ್ತ ಸ್ಥಳವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದ ಆಡಳಿತ ವ್ಯವಸ್ಥೆಯಲ್ಲಿ, ಬಳ್ಳಾರಿಯನ್ನು ಮಹಾನಗರಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿಕೊಳ್ಳುವ ರಾಜಕಾರಣಿಗಳ ಹೇಳಿಕೆಗಳು ಎಷ್ಟರ ಮಟ್ಟಿಗೆ ವಾಸ್ತವಿಕ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಇದಕ್ಕೆ ಸಾಕ್ಷಿಯೆಂಬಂತೆ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ನಡೆದಿರುವ ಶೌಚಾಲಯ ನಿರ್ಮಾಣ ಕಾಮಗಾರಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಸರ್ಕಾರದ ಅನುದಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ಹಾಗೂ ಸ್ನಾನಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ, 2023-24ನೇ ಸಾಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಅನುದಾನದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂಭಾಗದಲ್ಲಿಯೇ ಮತ್ತೊಂದು ಶೌಚಾಲಯ ನಿರ್ಮಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಳೆಯ ಶೌಚಾಲಯವಿರುವಾಗ ಹೊಸ ಶೌಚಾಲಯದ ಅಗತ್ಯವೇನಿತ್ತು?
ಈಗಾಗಲೇ ಸಾರ್ವಜನಿಕರ ಬಳಕೆಗೆ ಶೌಚಾಲಯವಿರುವಾಗ ಅದರ ಮುಂಭಾಗದಲ್ಲಿಯೇ ಮತ್ತೊಂದು ಶೌಚಾಲಯ ನಿರ್ಮಿಸುವ ಅಗತ್ಯವೇನಿತ್ತು?
ಇದಕ್ಕಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ? ಕಾಮಗಾರಿಗೆ ಯಾರು ಅನುಮೋದನೆ ನೀಡಿದ್ದಾರೆ? ಈ ಕಾಮಗಾರಿಯ ಅವಶ್ಯಕತೆಯನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಿದೆ.
ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ಬದಲು, ಈಗಾಗಲೇ ಇರುವ ಸೌಲಭ್ಯದ ಪಕ್ಕದಲ್ಲಿಯೇ ಮತ್ತೊಂದು ಕಾಮಗಾರಿ ಕೈಗೊಂಡಿರುವುದು ಸಾರ್ವಜನಿಕ ಹಣದ ಸದ್ಬಳಕೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದು ಅನಗತ್ಯ ವೆಚ್ಚವಾಗಿದ್ದರೆ ಅದಕ್ಕೆ ಹೊಣೆಗಾರರು ಯಾರು ಎಂಬುದನ್ನು ಜಿಲ್ಲಾಡಳಿತ ತನಿಖೆ ಮೂಲಕ ಬಹಿರಂಗಪಡಿಸಬೇಕು.
ಬಿಸಿನೀರಿನ ವ್ಯವಸ್ಥೆಯ ಹೆಸರಿನಲ್ಲಿ ಹಣ ವಸೂಲಿ ಆರೋಪ!
ಇನ್ನೊಂದೆಡೆ, ಮಾರುಕಟ್ಟೆಗೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರಿಗೆ ಬಿಸಿನೀರಿನ ವ್ಯವಸ್ಥೆ ಇದೆ ಎಂದು ಫಲಕ ಅಳವಡಿಸಿರುವ ವಿಚಾರವೂ ಸಾರ್ವಜನಿಕರ ಗಮನ ಸೆಳೆದಿದೆ.
ಈ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆಯೇ? ಮಾಡುತ್ತಿದ್ದರೆ ಯಾವ ನಿಯಮದಡಿ ವಸೂಲಿ ಮಾಡಲಾಗುತ್ತಿದೆ? ಸಂಗ್ರಹವಾಗುವ ಹಣ ಯಾರ ಖಾತೆಗೆ ಜಮೆಯಾಗುತ್ತಿದೆ? ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯಗಳನ್ನೇ ಹಣ ಗಳಿಕೆಯ ಮಾರ್ಗವನ್ನಾಗಿ ಮಾಡಲಾಗುತ್ತಿದೆಯೇ ಎಂಬ ಅನುಮಾನಗಳಿಗೆ ತೆರೆ ಎಳೆಯಬೇಕಿದೆ.
ಜನಪ್ರತಿನಿಧಿಗಳ ಮೌನಕ್ಕೆ ಕಾರಣವೇನು?
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.
ರೈತರು, ವ್ಯಾಪಾರಿಗಳು, ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ನಿತ್ಯವೂ ಇಲ್ಲಿಗೆ ಆಗಮಿಸುತ್ತಾರೆ. ಇಷ್ಟೊಂದು ಪ್ರಮುಖ ವಾಣಿಜ್ಯ ಕೇಂದ್ರದಲ್ಲಿ ಶೌಚಾಲಯ, ಪಕ್ಕದಲ್ಲಿ ಮತ್ತೊಂದು ಶೌಚಾಲಯ ನಿರ್ಮಾಣ ಎಷ್ಟು ಸರಿ, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇಂತಹ ವಿಚಾರಗಳು ಬಹಿರಂಗವಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಮಾರುಕಟ್ಟೆ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ನಾಯಕರು ಕಣ್ಣುಮುಚ್ಚಿ ಕುಳಿತರೆ, ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ಆಡಳಿತ ನಡೆಸಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಾದರೂ ಹೇಗೆ?
ಜಿಲ್ಲಾಡಳಿತ ತಕ್ಷಣ ತನಿಖೆ ನಡೆಸಲಿ
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಗಾಗಲೇ ಇದ್ದ ಶೌಚಾಲಯದ ಮುಂಭಾಗದಲ್ಲಿ ಮತ್ತೊಂದು ಶೌಚಾಲಯ ನಿರ್ಮಿಸಿರುವ ಕಾಮಗಾರಿಯ ಕುರಿತು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು. 2023-24ನೇ ಸಾಲಿನ ಅನುದಾನದ ಮೊತ್ತ, ಕಾಮಗಾರಿಯ ಅಂದಾಜು ವೆಚ್ಚ, ಟೆಂಡರ್ ಪ್ರಕ್ರಿಯೆ, ಕಾರ್ಯಾದೇಶ, ಕಾಮಗಾರಿಯ ಗುಣಮಟ್ಟ ಹಾಗೂ ಹಣ ಪಾವತಿಯ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು.
ಅನಗತ್ಯ ಕಾಮಗಾರಿಯಿಂದ ಸಾರ್ವಜನಿಕ ಹಣ ಪೋಲಾಗಿರುವುದು ತನಿಖೆಯಲ್ಲಿ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹೊಣೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇ ರೀತಿ ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು.
ಅಭಿವೃದ್ಧಿಯ ಭಾಷಣಕ್ಕಿಂತ ಜನರಿಗೆ ಬೇಕಿರುವುದು ಮೂಲಭೂತ ಸೌಕರ್ಯಗಳು. ನಗರವನ್ನು ಮಹಾನಗರಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇವೆ ಎನ್ನುವ ರಾಜಕಾರಣಿಗಳು ಮೊದಲು ಸಾರ್ವಜನಿಕರಿಗೆ ಅಗತ್ಯವಿರುವ ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರೂಪಿಸಲಿ. ಇಲ್ಲವಾದರೆ ಅಭಿವೃದ್ಧಿಯ ಮಾತುಗಳೆಲ್ಲ ಕೇವಲ ಪ್ರಚಾರದ ಘೋಷಣೆಗಳಾಗಿ ಉಳಿಯಲಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.













