ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ
ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಬಳಿಯುವುದು ಸರಿಯಲ್ಲ: ಜನಾರ್ದನ ರೆಡ್ಡಿ.
ಬಳ್ಳಾರಿ(21) ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಬಳಿದು ಆರೋಪಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ವಾಲ್ಮೀಕಿ ನಿಗಮದ ಹಣಕಾಸು ಅಕ್ರಮ ನಡೆದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದರ ಹಿಂದೆ ಏನು ಬದಲಾವಣೆಯಾಗಿದೆ ಎಂದು ಪ್ರಶ್ನಿಸಿದರು.
“ಭ್ರಷ್ಟಾಚಾರಕ್ಕೆ ಜಾತಿ ಇರುತ್ತದೆಯೇ? ದಲಿತ ಸಚಿವ ಎಂಬ ಕಾರಣಕ್ಕೆ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಭ್ರಷ್ಟಾಚಾರಕ್ಕೆ ಜಾತಿಯ ಲೇಬಲ್ ಹಾಕುವುದು ನಾಚಿಕೆಗೇಡಿನ ಸಂಗತಿ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾಗೇಂದ್ರ ಅವರು ತಮ್ಮ ವಿರುದ್ಧ ಹೊಟ್ಟೆಕಿಚ್ಚಿನಿಂದ ಆರೋಪ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ತಾವು ಯಾರ ಜಾತಿಯನ್ನೂ ನೋಡಿ ರಾಜಕೀಯ ಮಾಡಿಲ್ಲ. ಎಸ್ಟಿ ಮೀಸಲಾತಿ ಬಂದ ಸಂದರ್ಭದಲ್ಲಿ ತಮ್ಮೊಂದಿಗೆ ಇದ್ದ ನಾಯಕರಿಗೆ ರಾಜಕೀಯ ಅವಕಾಶ ಕಲ್ಪಿಸಿದ್ದೇನೆ. ತಮ್ಮೊಂದಿಗೆ ಬದುಕಿಗಾಗಿ ಬಂದವರನ್ನು ಬೆಳೆಸುವ ಉದ್ದೇಶವೇ ತಮ್ಮದಾಗಿತ್ತು ಎಂದು ಜನಾರ್ದನ ರೆಡ್ಡಿ ಹೇಳಿದರು.
ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಕುರಿತು ಮಾತನಾಡಿದ ಅವರು, ಹಣವನ್ನು ನಂತರ ವಾಪಸ್ ಪಡೆಯಲಾಗಿದೆ ಎಂಬ ಕಾರಣಕ್ಕೆ ಕಳ್ಳತನವೇ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. “ಕಳ್ಳತನ ಮಾಡಿ ಹಣವನ್ನು ವಾಪಸ್ ಪಡೆದರೆ ಕಳ್ಳತನ ಮುಗಿದುಹೋಗುತ್ತದೆಯೇ?” ಎಂದು ಪ್ರಶ್ನಿಸಿದರು.
ನಿಗಮದ ಹಣವನ್ನು ತೆಲಂಗಾಣ, ಗೋವಾ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಹಾಗೂ ಸಂಡೂರು ಚುನಾವಣೆಯಲ್ಲೂ ಬಳಸಲಾಗಿದೆ ಎಂಬ ಆರೋಪಗಳಿವೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಕೆಲ ಶಾಸಕರಿಗೆ ಹಣ ಹಂಚಿಕೆಯಾಗಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ಗಂಭೀರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಜೀವಕ್ಕೆ ಏನಾದರೂ ಅಪಾಯವಾದರೆ ಅದಕ್ಕೆ ನಾಗೇಂದ್ರ ಅವರೇ ಹೊಣೆ ಎಂದು ಅವರು ಹೇಳಿರುವುದಾಗಿ ಜನಾರ್ದನ ರೆಡ್ಡಿ ತಿಳಿಸಿದರು.
ತಮ್ಮ ವಿರುದ್ಧದ ಗಣಿಗಾರಿಕೆ ಪ್ರಕರಣವನ್ನು ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, ಹಿಂದೆ ಸಿದ್ದರಾಮಯ್ಯ ಅವರು ಪಾದಯಾತ್ರೆ ನಡೆಸಿ, ಸೋನಿಯಾ ಗಾಂಧಿ ಅವರ ಮೂಲಕ ತಮ್ಮನ್ನು ಬಂಧಿಸುವಂತೆ ಒತ್ತಡ ತಂದಾಗ ಸಿಬಿಐ ಉತ್ತಮ ಸಂಸ್ಥೆಯಾಗಿತ್ತು. ಆದರೆ ನಾಗೇಂದ್ರ ಪ್ರಕರಣದಲ್ಲಿ ತನಿಖೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಒಂದೇ ಸಂಸ್ಥೆಯನ್ನು ಸಂದರ್ಭಕ್ಕೆ ತಕ್ಕಂತೆ ಒಳ್ಳೆಯದು, ಕೆಟ್ಟದ್ದು ಎಂದು ಹೇಳುವುದು ಸರಿಯಲ್ಲ ಎಂದರು.
ಬರ ಘೋಷಣೆಗೆ ಆಗ್ರಹ
ಉತ್ತರ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಗಂಭೀರವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕು ಎಂದು ಜನಾರ್ದನ ರೆಡ್ಡಿ ಆಗ್ರಹಿಸಿದರು. ಬಿಜೆಪಿ ವತಿಯಿಂದ ಈಗಾಗಲೇ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಲಾಗಿದೆ. ಸರ್ಕಾರ ಬರ ಘೋಷಣೆ ಮಾಡಿದ ಬಳಿಕ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದರು.
ಶ್ರೀರಾಮುಲು ನೇತೃತ್ವದಲ್ಲಿ ಸದನದ ಅಧಿವೇಶನ ಮುಗಿದ ಬಳಿಕ ವಾಲ್ಮೀಕಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಗತ್ಯವಿದ್ದರೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟವನ್ನೂ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶ್ರೀರಾಮುಲು ಪರ ರೆಡ್ಡಿ ಬ್ಯಾಟಿಂಗ್
ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧದ ಭೂವಿವಾದದ ಆರೋಪಗಳಿಗೂ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದರು. ಶ್ರೀರಾಮುಲು ಅವರು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿಯಾಗಿದ್ದು, ಸರ್ಕಾರಿ ಜಮೀನು ಕಬಳಿಕೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಇದು ಸರ್ಕಾರಿ ಜಮೀನಿನ ವಿಚಾರವಲ್ಲ. ಖಾಸಗಿ ವ್ಯಕ್ತಿಯೊಬ್ಬರು ಜಮೀನು ನೋಂದಣಿ ಮಾಡಿಕೊಟ್ಟ ಬಳಿಕ ಅದೇ ಜಮೀನನ್ನು ಮತ್ತೊಬ್ಬರಿಗೆ ನೋಂದಣಿ ಮಾಡಿಕೊಟ್ಟಿರುವುದರಿಂದ ಉಂಟಾದ ವಿವಾದವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಇಬ್ಬರು ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ವ್ಯಾಜ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
“ನನ್ನ ವಿರುದ್ಧ ರಾಜಕೀಯವಾಗಿ ಆರೋಪಗಳನ್ನು ಮಾಡಬಹುದು. ಆದರೆ ಸಚಿವ ಸ್ಥಾನ ಸಿಕ್ಕ ಕೂಡಲೇ ₹187 ಕೋಟಿ ಹಣ ಲೂಟಿ ಹೊಡೆದ ಆರೋಪವನ್ನು ನನ್ನ ಮೇಲೆ ಯಾರೂ ಮಾಡಿಲ್ಲ,” ಎಂದು ಜನಾರ್ದನ ರೆಡ್ಡಿ ನಾಗೇಂದ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮದ ಹಣಕಾಸು ಅಕ್ರಮದ ಕುರಿತು ಸದನದಲ್ಲಿಯೂ ನಿರಂತರವಾಗಿ ಹೋರಾಟ ನಡೆಸಲಾಗುವುದು. ಸರ್ಕಾರ ಆರೋಪಗಳನ್ನು ಸಮರ್ಥಿಸಿಕೊಳ್ಳುವ ಬದಲು ಸಂಪೂರ್ಣ ಸತ್ಯವನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂದು ಅವರು ಒತ್ತಾಯಿಸಿದರು.
News 9 Today > State > ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಬಳಿಯುವುದು ಸರಿಯಲ್ಲ: ಜನಾರ್ದನ ರೆಡ್ಡಿ.
ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಬಳಿಯುವುದು ಸರಿಯಲ್ಲ: ಜನಾರ್ದನ ರೆಡ್ಡಿ.
Bajarappa21/08/2026
posted on














