ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಮೇಲೆ ಜಿಲ್ಲಾಡಳಿತ ದಾಳಿ: ನೂರಾರು ಪಡಿತರ ರಾಗಿ, ಚೀಲಗಳು ವಶಕ್ಕೆ!
ಬಳ್ಳಾರಿ (26)ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ನೂರಾರು ಚೀಲ ಪಡಿತರ ರಾಗಿಯನ್ನು ವಶಕ್ಕೆ ಪಡೆದಿದ್ದಾರೆ.
ಸರ್ಕಾರದ ಪಡಿತರ ವ್ಯವಸ್ಥೆಯಡಿ ಬಡವರಿಗೆ ವಿತರಿಸಬೇಕಾದ ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.
ಸಹಾಯಕ ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ರಾಗಿ ಚೀಲಗಳನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದಿದ್ದಾರೆ.
ಮಾರುಕಟ್ಟೆಯ ಹಲವು ಅಂಗಡಿಗಳಲ್ಲಿ ದಾಖಲೆಗಳಿಲ್ಲದೆ ರಾಗಿ ಸಂಗ್ರಹಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಮಾರುಕಟ್ಟೆ ಅಧಿಕಾರಿಗಳು ಗಮನಹರಿಸಿರಲಿಲ್ಲವೇ? ಅಥವಾ ಈ ವ್ಯವಹಾರಕ್ಕೆ ಪರೋಕ್ಷವಾಗಿ ಸಹಕಾರ ನೀಡಲಾಗುತ್ತಿತ್ತೇ? ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
ಸರ್ಕಾರದ ಮಹತ್ವದ ಪಡಿತರ ಯೋಜನೆಯ ರಾಗಿಯೇ ಅಕ್ರಮ ಮಾರಾಟದ ಜಾಲಕ್ಕೆ ಸಿಲುಕಿರುವ ಆರೋಪ ಕೇಳಿಬಂದಿದ್ದು, ಈ ದಂಧೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ತನಿಖೆಯಿಂದ ಬಹಿರಂಗಪಡಿಸಬೇಕಿದೆ.
ವ್ಯಾಪಾರಿಗಳ ವಿರುದ್ಧ ನಿಜವಾಗಿಯೂ ಪ್ರಕರಣ ದಾಖಲಾಗುತ್ತದೆಯೇ? ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆಯೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.
ಜಿಲ್ಲಾಡಳಿತದ ಈ ದಾಳಿಯಿಂದ ಪಡಿತರ ರಾಗಿ ಅಕ್ರಮ ಮಾರಾಟ ಜಾಲದ ಸಂಪೂರ್ಣ ಬಣ್ಣ ಬಯಲಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.














