ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಸಂಸದ ತುಕಾರಾಂ ಆಕ್ರೋಶ!!.
ಬಳ್ಳಾರಿ(20) ಜಿಲ್ಲೆಯ ಸಂಡೂರು ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಸ್ಪಿರಿಟ್ ಮಿಶ್ರಿತ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಸಂಡೂರು ತಾಲೂಕು ಒಂದರಲ್ಲೇ ಸುಮಾರು 10 ಸಾವಿರ ಮಹಿಳೆಯರು ಪತಿಯನ್ನು ಕಳೆದುಕೊಂಡು ವಿಧವೆಯರಾಗಿದ್ದಾರೆ ಎಂದು ಸಂಸದ ತುಕಾರಾಂ ಕಳವಳ ವ್ಯಕ್ತಪಡಿಸಿದರು.
ಗುರುವಾರ ನಡೆದ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಸ್ಪಿರಿಟ್ ಮಿಶ್ರಿತ ಆಲ್ಕೋಹಾಲ್ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಕುಟುಂಬಗಳು ಸರ್ವನಾಶವಾಗುತ್ತಿವೆ. ಇದು ಅತ್ಯಂತ ಅಪಾಯಕಾರಿ ಹಾಗೂ ದುರಂತದ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ಕೆಲವರು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಮದ್ಯ ಮಾರಾಟದಿಂದ ಗಳಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಗಳಿಗೆ ನೀಡುವ ಮೂಲಕ ತಮ್ಮ ಅಕ್ರಮ ಚಟುವಟಿಕೆಗಳಿಗೆ ಸಾಮಾಜಿಕ ಮಾನ್ಯತೆ ದೊರಕಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಅಮಾಯಕ ಕುಟುಂಬಗಳನ್ನು ರಕ್ಷಿಸಬೇಕಾದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇಷ್ಟೊಂದು ಗಂಭೀರ ಸಮಸ್ಯೆ ಇದ್ದರೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಏಕೆ? ಎಂದು ಸಂಸದ ತುಕಾರಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಕ್ರಮ ಮದ್ಯ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಿ, ಗ್ರಾಮೀಣ ಕುಟುಂಬಗಳನ್ನು ರಕ್ಷಿಸಲು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.













