ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ ವಿವಾದ: ಕಾನೂನುಬಾಹಿರ ಸಮಿತಿಯ ವಿರುದ್ಧ ಕ್ರಮಕ್ಕೆ ಕೆ. ಮೋಹನ್ ಎಚ್ಚರಿಕೆ

ಬಳ್ಳಾರಿ (14)ಜಿಲ್ಲಾ ಕುರುಬರ ಸಂಘ (ರಿ), ನೋಂದಣಿ ಸಂಖ್ಯೆ: 03/1944ರ ಬೈಲಾ ನಿಯಮಗಳ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯ 31 ನಿರ್ದೇಶಕರನ್ನು ಚುನಾಯಿಸಬೇಕು. ಚುನಾಯಿತ 31 ನಿರ್ದೇಶಕರ ಪೈಕಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಸಂಘದ ಬೈಲಾ ನಿಯಮಗಳ ಪ್ರಕಾರ ನಡೆಯಬೇಕು.
ಆದರೆ, ದಿನಾಂಕ 08-11-2023ರಂದು ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ಬೈಲಾ ನಿಯಮಗಳನ್ನು ಪಾಲಿಸಿಲ್ಲವೆಂದು ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲಾ ಕುರುಬರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿತ್ತು.
ಆಡಳಿತಾಧಿಕಾರಿಯವರು ದಿನಾಂಕ 29-10-2023ರಂದು ಸಂಘದ 31 ನಿರ್ದೇಶಕರ ಚುನಾವಣೆಯನ್ನು ನಡೆಸಿ, ಚುನಾಯಿತರಾದ ನಿರ್ದೇಶಕರ ಮೂಲಕ ದಿನಾಂಕ 08-11-2023ರಂದು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ, ಆಯ್ಕೆಯಾದ ಪದಾಧಿಕಾರಿಗಳ ಸಮಿತಿ ಹಾಗೂ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದರು.
ಅಂದು ನಡೆದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ಡಾ. ಪಿ.ಎಲ್. ಗಾದಿಲಿಂಗನಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಮೋಹನ್, ಖಜಾಂಚಿಯಾಗಿ ಕೆ.ಹೆಚ್. ಕಾಮರಾಜ, ಉಪಾಧ್ಯಕ್ಷರಾಗಿ ಕೆ. ನಾಗರಾಜ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಬಿ. ಅಂಜಿನಿ ಹಾಗೂ ಸಹ ಕಾರ್ಯದರ್ಶಿಯಾಗಿ ಕೆ.ಆರ್. ಪಂಪಾಪತಿ ಅವರು ಆಯ್ಕೆಯಾಗಿದ್ದರು.
ದಿನಾಂಕ 08-11-2023ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಸೋಲನುಭವಿಸಿದ ಕೆಲವು ಅಭ್ಯರ್ಥಿಗಳು ಹಾಗೂ ನಿರ್ದೇಶಕರು ಹತಾಶರಾಗಿ, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಂಘಗಳ ನಿಬಂಧಕರೊಂದಿಗೆ ಶಾಮೀಲಾಗಿ, ಆಮಿಷಗಳನ್ನು ಒಡ್ಡುವ ಮೂಲಕ ದಿನಾಂಕ 03-03-2025ರಂದು ಕಾನೂನುಬದ್ಧವಾಗಿ ಆಯ್ಕೆಯಾಗಿದ್ದ ಪದಾಧಿಕಾರಿಗಳ ಸಮಿತಿಯನ್ನು ವಜಾಗೊಳಿಸಿ ಆದೇಶ ಹೊರಡಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಹಿಂದೆ ಸೋಲನುಭವಿಸಿದ್ದ ನಿರ್ದೇಶಕರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿರುವುದಾಗಿ ಆದೇಶ ಹೊರಡಿಸಿರುವುದು ಕಾನೂನುಬಾಹಿರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕಾನೂನುಬಾಹಿರ ಆದೇಶದ ವಿರುದ್ಧ ಕಾನೂನುಬದ್ಧವಾಗಿ ಆಯ್ಕೆಯಾದ ಪದಾಧಿಕಾರಿಗಳ ಪರವಾಗಿ ಅಧ್ಯಕ್ಷ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರ ಹೆಸರಿನಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಂಖ್ಯೆ 102803/2025ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯವು ವಿವಾದಿತ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ಇತ್ತೀಚೆಗೆ ದಿನಾಂಕ 07-10-2026ರಂದು ರಿಟ್ ಅರ್ಜಿಯ ವಿಚಾರಣೆ ನಡೆದ ಸಂದರ್ಭದಲ್ಲಿ, ಅರ್ಜಿದಾರರಾದ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರು ಉಳಿದ ಪದಾಧಿಕಾರಿಗಳೊಂದಿಗೆ ಚರ್ಚಿಸದೆ, ಚುನಾವಣೆಯಲ್ಲಿ ಸೋಲನುಭವಿಸಿದ್ದ ಅಭ್ಯರ್ಥಿಗಳೊಂದಿಗೆ ಶಾಮೀಲಾಗಿ, ಆಮಿಷಗಳಿಗೆ ಒಳಗಾಗಿ ಸಂಘದ ಬೈಲಾ ನಿಯಮಗಳಿಗೆ ವಿರುದ್ಧವಾಗಿ ದಿನಾಂಕ 03-10-2026ರಂದು ತಮ್ಮ ರಾಜೀನಾಮೆ ಪತ್ರವನ್ನು ಉಪನಿಬಂಧಕರಿಗೆ ಸಲ್ಲಿಸಿದ್ದಾರೆ.
ನಂತರ ಸದರಿ ರಾಜೀನಾಮೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ರಿಟ್ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಧ್ಯಕ್ಷ ಡಾ. ಪಿ.ಎಲ್. ಗಾದಿಲಿಂಗನಗೌಡ ಅವರು ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸುವ ಅಧಿಕಾರ ಉಪನಿಬಂಧಕರಿಗೆ ಇರುವುದಿಲ್ಲ. ರಾಜೀನಾಮೆ ಪತ್ರವನ್ನು ಸ್ವೀಕರಿಸುವ ಹಾಗೂ ಅಂಗೀಕರಿಸುವ ಅಧಿಕಾರ ಸಂಘದ ಕಾರ್ಯಕಾರಿ ಸಮಿತಿಗೆ ಮಾತ್ರ ಇರುತ್ತದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ದಿನಾಂಕ 03-10-2026ರಂದು ತಮ್ಮ ಕಚೇರಿಗೆ ಸಲ್ಲಿಸಲಾಗಿದ್ದ ರಾಜೀನಾಮೆ ಪತ್ರವನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಿಗೆ ದಿನಾಂಕ 14-10-2026ರಂದು ರವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ದಿನಾಂಕ 08-11-2023ರಂದು ಕಾನೂನುಬದ್ಧವಾಗಿ ಆಯ್ಕೆಯಾದ ಪದಾಧಿಕಾರಿಗಳ ಸಮಿತಿಯೇ ಮಾನ್ಯವಾಗಿದ್ದು, ಬೇರೆ ಯಾವುದೇ ರೀತಿಯಲ್ಲಿ ಸ್ವಯಂ ಘೋಷಿಸಿಕೊಂಡಿರುವ ಪದಾಧಿಕಾರಿಗಳ ಸಮಿತಿಯು ಕಾನೂನುಬಾಹಿರವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
ಸ್ವಯಂ ಘೋಷಿತ ಕಾನೂನುಬಾಹಿರ ಪದಾಧಿಕಾರಿಗಳ ಸಮಿತಿಯ ಕಾರ್ಯಚಟುವಟಿಕೆಗಳ ವಿರುದ್ಧ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಮೋಹನ್,ಅಂಜಿನಿ, ಪಂಪಾಪತಿ ಅವರು ಗುರುವಾರ ಸಂಘದಲ್ಲಿ ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















