ಎಫ್‌ಐಆರ್ ಖಂಡಿಸಿ ಬಿಜೆಪಿಯ ಬೃಹತ್ ಪ್ರತಿಭಟನೆ
ಬ್ರೂಸ್‌ಪೇಟೆ ಠಾಣೆ ಮುತ್ತಿಗೆಗೆ ಯತ್ನ: ನೂರಾರು ಕಾರ್ಯಕರ್ತರು ಪೊಲೀಸ್ ವಶಕ್ಕೆ
ಬಳ್ಳಾರಿ, ಅ.5: ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಸಂಬಂಧಿಸಿದಂತೆ 7,561 ಮತಗಳ ಅಕ್ರಮದ ಆರೋಪವನ್ನು ಮುಂದಿಟ್ಟಿದ್ದ ಬಿಜೆಪಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋದ್ಕರ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದ ರಾಯಲ್ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರು ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು. ಇದರಿಂದಾಗಿ ಠಾಣೆ ಸುತ್ತಮುತ್ತ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮುತ್ತಿಗೆಗೆ ಮುಂದಾದ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಮೀರದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.
ಶ್ರೀನಿವಾಸ್ ಮೋದ್ಕರ್ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರಾಜಕೀಯ ಪ್ರೇರಿತವಾಗಿದ್ದು, ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಮತದಾರರ ಪಟ್ಟಿಗೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಬಿಜೆಪಿ ಪ್ರಶ್ನಿಸುತ್ತಿರುವುದನ್ನು ಹತ್ತಿಕ್ಕುವ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 7,561 ಮತಗಳ ಅಕ್ರಮದ ಆರೋಪದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಪ್ರಶ್ನಿಸುವುದು ಪ್ರತಿಯೊಬ್ಬ ರಾಜಕೀಯ ಪಕ್ಷ ಹಾಗೂ ನಾಗರಿಕನ ಹಕ್ಕು. ಈ ವಿಚಾರವನ್ನು ಪ್ರಸ್ತಾಪಿಸಿದ ಕಾರಣಕ್ಕೆ ಬಿಜೆಪಿ ಮುಖಂಡರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶ್ರೀನಿವಾಸ್ ಮೋದ್ಕರ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಯಲ್ ಸರ್ಕಲ್‌ನಿಂದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯತ್ತ ಬಿಜೆಪಿ ಕಾರ್ಯಕರ್ತರು ಮುನ್ನಡೆಯುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಈ ವೇಳೆ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಂತರ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.













