ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್ ಮುಖಂಡರ ತಿರುಗೇಟು: ‘10ಕ್ಕೆ 10 ಕ್ಷೇತ್ರಗಳಲ್ಲಿ ಗೆದ್ದು ತೋರಿಸುತ್ತೇವೆ’
ಬಳ್ಳಾರಿ: ನಗರದ ಕಮ್ಮ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಮುಖಂಡರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದರು. ಮುಂಬರುವ ಚುನಾವಣೆಯಲ್ಲಿ ಬಳ್ಳಾರಿ ವಿಭಾಗದ ಎಲ್ಲಾ 10 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಂಸದ ಇ. ತುಕಾರಾಂ ಸೇರಿದಂತೆ ಹಲವು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಇ. ತುಕಾರಾಂ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಜನಪರ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಸಹಿಸದ ಬಿಜೆಪಿ ನಾಯಕರು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದು, ವಿಧಾನಸಭೆಯಲ್ಲಿ ಚರ್ಚೆ ನಡೆಸುವ ಬದಲು ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು.
ಜನಾರ್ಧನ ರೆಡ್ಡಿ ಅವರು ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಶಾಸಕರ ರಾಜೀನಾಮೆ ಕೇಳುವ ಮೊದಲು ಗಂಗಾವತಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಜನರ ಪ್ರೀತಿ ಮತ್ತು ವಿಶ್ವಾಸದಿಂದ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಮುಂದಿನ ಚುನಾವಣೆಯಲ್ಲೂ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಕೆಲ ಬಿಜೆಪಿ ನಾಯಕರು ತಾವೇ ಎಲ್ಲವನ್ನೂ ನಿರ್ಧರಿಸಬಹುದು ಎಂಬ ಧೋರಣೆಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. “ಪಾದಯಾತ್ರೆಯಷ್ಟೇ ಅಲ್ಲ, ಮೊಣಕಾಲು ಯಾತ್ರೆ ಮಾಡಿದರೂ ಕಾಂಗ್ರೆಸ್ ಪಕ್ಷದ ಗೆಲುವನ್ನು ತಡೆಯಲು ಸಾಧ್ಯವಿಲ್ಲ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಂಗಾವತಿ ಕ್ಷೇತ್ರದ ಬಗ್ಗೆ ಮಾತನಾಡುವವರು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ. ಕಾಂಗ್ರೆಸ್ ಕಾರ್ಯಕರ್ತರ ಶಕ್ತಿಯನ್ನು ಎದುರಿಸಿ ಗೆದ್ದು ತೋರಿಸಲಿ ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ಶಾಸಕ ಗಣೇಶ್ ಮಾತನಾಡಿ, ಬಳ್ಳಾರಿ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು, ಜನಾರ್ಧನ ರೆಡ್ಡಿ ಅವರು ನಡೆಸುತ್ತಿರುವ ಸುದ್ದಿಗೋಷ್ಠಿಗಳು ಜನರಿಗೆ ಯಾವುದೇ ಪ್ರಯೋಜನ ನೀಡುತ್ತಿಲ್ಲ ಎಂದು ಟೀಕಿಸಿದರು. ರೈತರು ಮತ್ತು ಜಿಲ್ಲೆಯ ಅಭಿವೃದ್ಧಿ ಕುರಿತು ಬಿಜೆಪಿ ನಾಯಕರು ಸ್ಪಷ್ಟವಾದ ನಿಲುವು ಹೊಂದಿಲ್ಲ ಎಂದು ಆರೋಪಿಸಿದರು.
“ಜನರು ಬುದ್ಧಿವಂತರಿದ್ದಾರೆ. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. 10ಕ್ಕೆ 10 ಕ್ಷೇತ್ರಗಳಲ್ಲಿ ಗೆದ್ದು ಬಂದ ನಂತರ ದೊಡ್ಡ ಮಾತುಗಳನ್ನು ಆಡಲಿ” ಎಂದು ಅವರು ಹೇಳಿದರು. ವಿಧಾನಸಭೆಯಲ್ಲಿ ಚರ್ಚೆಗೆ ಬರುವಂತೆ ಕಾಂಗ್ರೆಸ್ ಆಹ್ವಾನ ನೀಡಿದರೂ ಬಿಜೆಪಿ ನಾಯಕರು ಚರ್ಚೆಯಿಂದ ದೂರ ಉಳಿದು ಸದನದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಾಗೇಂದ್ರ ಅವರ ರಾಜೀನಾಮೆ ವಿಚಾರವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದರು. ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
“ನಮ್ಮ ಬಳಿ ಉತ್ತರ ನೀಡಲು ಸಿದ್ಧತೆ ಇದೆ. ಯಾವುದೇ ಸಾಕ್ಷ್ಯಗಳಿದ್ದರೆ ಎಸ್‌ಐಟಿ, ಇ.ಡಿ. ಅಥವಾ ಸಿಬಿಐಗೆ ನೀಡಲಿ. ತನಿಖೆಯ ಮೂಲಕ ಸತ್ಯ ಹೊರಬರಲಿ” ಎಂದು ಅವರು ಹೇಳಿದರು.
ನ್ಯಾಯಾಲಯದಿಂದ ಕ್ಲೀನ್ ಚಿಟ್ ದೊರೆತ ಬಳಿಕ ಹಾಗೂ ಕಾನೂನು ಸಲಹೆ ಪಡೆದುಕೊಂಡ ನಂತರವೇ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ ನಾಸಿರ್ ಹುಸೇನ್, ಬಳ್ಳಾರಿಯ ಜನತೆ ಈಗಾಗಲೇ ಕೆಲ ರಾಜಕೀಯ ನಾಯಕರನ್ನು ತಿರಸ್ಕರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಜನಾರ್ಧನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ರಾಜೀನಾಮೆಯ ಕುರಿತು ಅನಗತ್ಯವಾಗಿ ಪ್ರಶ್ನೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಪಕ್ಷಕ್ಕೆ ಮುಜುಗರವಾಗಬಾರದು ಹಾಗೂ ಪಕ್ಷದ ಗೌರವ ಕಾಪಾಡುವ ಉದ್ದೇಶದಿಂದಲೇ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
“ನಾನು ಬಳ್ಳಾರಿಯಲ್ಲಿ ಹುಟ್ಟಿ ಬೆಳೆದವನು. ಬಳ್ಳಾರಿ ಜನರೊಂದಿಗೆ ನನ್ನ ಅವಿನಾಭಾವ ಸಂಬಂಧವಿದೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ. ಇದಕ್ಕೆ ರಾಜ್ಯದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
ಜನಾರ್ಧನ ರೆಡ್ಡಿ ವಿರುದ್ಧ ವೈಯಕ್ತಿಕ ಹಾಗೂ ರಾಜಕೀಯ ಆರೋಪಗಳನ್ನು ಮಾಡಿದ ನಾಗೇಂದ್ರ, ತಮ್ಮ ಬಳಿ ಹಲವು ದಾಖಲೆಗಳಿವೆ ಎಂದು ಹೇಳಿ ಮಾಧ್ಯಮಗಳ ಮುಂದೆ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು. ಬಹಿರಂಗ ಚರ್ಚೆಗೆ ಬರಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಸಂಡೂರು ಉಪಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ಬಿಜೆಪಿ ನಾಯಕರು ತಮ್ಮ ರಾಜಕೀಯ ಶಕ್ತಿಯ ಬಗ್ಗೆ ಮಾತನಾಡುವ ಮೊದಲು ಹಿಂದಿನ ಚುನಾವಣಾ ಫಲಿತಾಂಶಗಳನ್ನು ಗಮನಿಸಬೇಕು ಎಂದು ಹೇಳಿದರು. “ಮುಂದಿನ ಚುನಾವಣೆಯಲ್ಲಿ 10ಕ್ಕೆ 10 ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್ ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಇದು ವಾಲ್ಮೀಕಿ ನಿಗಮದ ಹಗರಣ ಅಲ್ಲ. ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ನಡೆದ ಹಗರಣ” ಎಂದು ಅವರು ಹೇಳಿದರು.
ಮುಂದುವರಿದು ತೀವ್ರ ವಾಗ್ದಾಳಿ ನಡೆಸಿದ ನಾಗೇಂದ್ರ, “ನಾನು ಹಳೆಯ ನಾಗೇಂದ್ರ ಆದರೆ? ಎಂದು ಗುಡುಗಿದರು.
ಎಷ್ಟೇ ಎದುರಿಸಲು ಪ್ರಯತ್ನಿಸಿದರೂ ಹಿಂದೆ ಸರಿಯುವುದಿಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ ಅವರು,ನಾನು ಎಷ್ಟೇ ಇರಬಹುದು ಆದರೆ ನಿಮಗೆ ಮಿರ್ಚಿ ಇಡಲು ಅಷ್ಟೇ ಸಾಕು, ಬನ್ನಿ ಮಿರ್ಚಿ ಇಡುತ್ತೇನೆ” ಎಂದು ಏಕವಚನದಲ್ಲೇ ಸವಾಲು ಹಾಕಿದರು.
ಬಿಜೆಪಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, “ಪಾಪ, ಸೋಮಶೇಖರ್ ಎಲ್ಲಿ ಹೋದರು ಎಂಬುದು ಗೊತ್ತಿಲ್ಲವೇ? ಕರುಣಾಕರ ರೆಡ್ಡಿ ಎಲ್ಲಿ ಹೋದರು?” ಎಂದು ಪ್ರಶ್ನಿಸಿದರು.
ಮುಂದುವರಿದು ತೀವ್ರ ವಾಗ್ದಾಳಿ ನಡೆಸಿದ ನಾಗೇಂದ್ರ, ಯಾರು “ಬಡವರ ಗೊರಿಗಳ ಮೇಲೆ ಮನೆ ಕಟ್ಟಿಕೊಂಡು ಎನ್ನುವವರ ಬಗ್ಗೆ ಜನರಿಗೆ ಎಲ್ಲವೂ ಗೊತ್ತಿದೆ” ಎಂದು ಆರೋಪಿಸಿದರು.
ತಮ್ಮ ವಿರುದ್ಧ ರಾಜಕೀಯವಾಗಿ ನಡೆಯುತ್ತಿರುವ ಟೀಕೆ ಮತ್ತು ಆರೋಪಗಳಿಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದ ನಾಗೇಂದ್ರ, ಯಾವುದೇ ಸವಾಲಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಸಿರ್ ಹುಸೇನ್, ಬಿ. ನಾಗೇಂದ್ರ, ನಾರಾ ಭರತ್ ರೆಡ್ಡಿ, ಇ. ತುಕಾರಾಂ, ಗಣೇಶ್, ಅನ್ನಪೂರ್ಣ ತುಕಾರಾಂ, ಮುಂಡರಗಿ ನಾಗರಾಜ್, ಗಾದೆಪ್ಪ, ಜೆ.ಎಸ್. ಆಂಜನೇಯಲು ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.














