This is the title of the web page
This is the title of the web page

Please assign a menu to the primary menu location under menu

State

ಸಬ್‌ ರಿಜಿಸ್ಟ್ರಾರ್ ಬಂಧನಕ್ಕೆ ಆಗ್ರಹ: ದಲಿತ ರೈತನಿಗೆ ರಕ್ಷಣೆ ನೀಡುವಂತೆ ಒತ್ತಾಯ

ಸಬ್‌ ರಿಜಿಸ್ಟ್ರಾರ್ ಬಂಧನಕ್ಕೆ ಆಗ್ರಹ: ದಲಿತ ರೈತನಿಗೆ ರಕ್ಷಣೆ ನೀಡುವಂತೆ ಒತ್ತಾಯ

ಸಬ್‌ ರಿಜಿಸ್ಟ್ರಾರ್ ಬಂಧನಕ್ಕೆ ಆಗ್ರಹ: ದಲಿತ ರೈತನಿಗೆ ರಕ್ಷಣೆ ನೀಡುವಂತೆ ಒತ್ತಾಯ

ಬಳ್ಳಾರಿ : ಜಾತಿ ದೌರ್ಜನ್ಯ, ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪ ಎದುರಿಸುತ್ತಿರುವ ಸಿರುಗುಪ್ಪ ಸಬ್‌ ರಿಜಿಸ್ಟ್ರಾರ್ ಯಲ್ಲಾರೆಡ್ಡೆಪ್ಪ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಹಲ್ಲೆಗೊಳಗಾದ ದಲಿತ ರೈತ ಹೆಚ್. ಗಾಳೆಪ್ಪ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರುತಿ ಹಾಗೂ ಶಿವಶಂಕರ್, ಆಗಸ್ಟ್ 13ರಂದು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಹೆಚ್. ಗಾಳೆಪ್ಪ ಅವರ ಮೇಲೆ ಯಲ್ಲಾರೆಡ್ಡೆಪ್ಪ ಹಾಗೂ ಅವರೊಂದಿಗೆ ಬಂದಿದ್ದ ಇತರರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಘಟನೆಗೆ ಸಂಬಂಧಿಸಿದಂತೆ ಯಲ್ಲಾರೆಡ್ಡೆಪ್ಪ ಸೇರಿದಂತೆ ಆರು ಮಂದಿ ವಿರುದ್ಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 13ರಂದು ದೂರು ದಾಖಲಾಗಿದ್ದು, ಕೊಲೆ ಬೆದರಿಕೆ, ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಆರೋಪಿಗಳ ಬಂಧನವಾಗಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಸಿ–ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಆರೋಪಿ ಯಲ್ಲಾರೆಡ್ಡೆಪ್ಪ ಅವರು ಸಿರುಗುಪ್ಪ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಕಾನೂನು ಸುವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಯಲ್ಲಾರೆಡ್ಡೆಪ್ಪ ಅವರು ಆಗಸ್ಟ್ 17ರಂದು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಅವರನ್ನು ತಕ್ಷಣ ಬಂಧಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಇದರೊಂದಿಗೆ 64-ಹಳೇಕೋಟೆ ಹಾಗೂ ದೇವಲಾಪುರ ಗ್ರಾಮಗಳ ವ್ಯಾಪ್ತಿಯ ಸರ್ವೇ ನಂಬರ್‌ಗಳಿಗೆ ಸಂಬಂಧಿಸಿದ ಸುಮಾರು 143 ಎಕರೆ 32 ಸೆಂಟ್ಸ್ ಜಮೀನನ್ನು ಕರ್ನಾಟಕ ಸರ್ಕಾರದ ಹೆಸರಿನಲ್ಲಿ ನಮೂದಿಸಿರುವ ಆದೇಶದ ಪ್ರತಿಗಳು ದೊರೆತಿವೆ. ಇದು ರೈತರ ಹೋರಾಟಕ್ಕೆ ದೊರೆತ ಮಹತ್ವದ ಜಯವಾಗಿದೆ ಎಂದು ಮುಖಂಡರು ಸಂತಸ ವ್ಯಕ್ತಪಡಿಸಿದರು. ಈ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸರ್ಕಾರ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಹಲ್ಲೆ ಮತ್ತು ಜಾತಿ ದೌರ್ಜನ್ಯಕ್ಕೆ ಒಳಗಾಗಿರುವ ಹೆಚ್. ಗಾಳೆಪ್ಪ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುನಿಯಪ್ಪ, ಮಲ್ಲಯ್ಯ, ಒಬ್ಳೆಶ್ವರಪ್ಪ, ಮಾರುತಿ ಗಾಳೆಪ್ಪ, ನಾಗರಾಜ್ ಹಾಗೂ ಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.


News 9 Today

Leave a Reply