ವಿದ್ಯಾರ್ಥಿಗಳು ನಿರಂತರ ಓದುವ ಹವ್ಯಾಸ ರೂಢಿಸಿಕೊಂಡರೆ ಸಾಧನೆ ಸಾಧ್ಯ – ಯಾಳ್ಪಿ ವಲಿಭಾಷ
ಸಿರುಗುಪ್ಪ:ಅ,08; ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಂಡರೆ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ’ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಹೇಳಿದರು.
ನಗರದ ಜ್ಞಾನಭಾರತಿ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಸಿರುಗುಪ್ಪ ತಾಲೂಕ ಘಟಕದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಓದುವ ಹವ್ಯಾಸ ರೂಢಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಮಾಜಿಕ, ಶೈಕ್ಷಣಿಕ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ವಿದ್ಯೆ ಕಲಿಸುವ ಗುರುಗಳ ಕೀರ್ತಿ, ಗೌರವ ತರಬೇಕು. ತಮ್ಮ ಅಭ್ಯಾಸ, ಪ್ರತಿಭೆಯ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಜನತೆಗೆ ನಿಜ ತಿಳಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದ ಅವರು
ದೃಶ್ಯ ಮಾಧ್ಯಮಗಳ ಪ್ರಭಾವದ ಮಧ್ಯೆಯೂ ಸಾರ್ವಜನಿಕರಿಗೆ ನಿಖರ ಸುದ್ದಿಗಳನ್ನು ನೀಡುತ್ತ ಪತ್ರಿಕೆಗಳು ನಂಬಿಕೆ, ವಿಶ್ವಾಸ ಉಳಿಸಿಕೊಂಡಿವೆ. ನಮ್ಮ ನಾಡಿನ ಪರಂಪರೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ. ಪ್ರಸ್ತುತ ಸ್ಫರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಆಗುವ ಪತ್ರಿಕೆಗಳ ಸಂಖ್ಯೆ ಹೆಚ್ಚಬೇಕು ಎಂದರು.
ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಸರಿಯಾಗಿ ಕರ್ತವ್ಯ ಮಾಡದೇ ಇದ್ದಾಗ ಪತ್ರಿಕಾ ರಂಗ ಅವುಗಳನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಇಂದು ಪತ್ರಿಕಾರಂಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ ಜನರಿಗೆ ಸುದ್ದಿಗಳನ್ನು ಮುಟ್ಟಿಸುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಿರುಗುಪ್ಪ ಉಪ ತಹಶಿಲ್ದಾರ ಸಿದ್ಧಾರ್ಥ ಕಾರಂಜಿ, ಜ್ಞಾನ ಭಾರತಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ದಮ್ಮೂರು ಮಲ್ಲಿಕಾರ್ಜುನ, ಸಾಧನ ಕೋಚಿಂಗ್ ಸೆಂಟರ್ ನ ಅಧ್ಯಕ್ಷ ಲಿಂಗನಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಡ್ಡೇರ್ ಸಿದ್ದಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ವಕೀಲರಾದ ಸುಧಾಕರ್, ಕಾಸೀಂ ಅಲಿ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಬಾಗೇವಾಡಿ ಅಲಂಭಾಷ, ಗೌರವಾಧ್ಯಕ್ಷ ಷಣ್ಮುಖ ಭಂಡಾರಿ, ಪತ್ರಕರ್ತರರಾದ ಪವನ್, ವಲಿಭಾಷ, ನೌಷದ್, ಸಿರಿಗೇರಿ ರಾಜ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತಿದ್ದರು.













