ನಾಗೇಂದ್ರ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು: ಶ್ರೀರಾಮುಲು.
ದಲಿತ ಮಕ್ಕಳ ಹಣ, ವಿದ್ಯಾರ್ಥಿವೇತನದ ಹಣ ದೋಚಿದ್ದೀರಾ?. ಇದಕ್ಕೆ ಜಾತಿ ಬಣ್ಣ ಬೇಡ. ಮೊದಲು ರಾಜೀನಾಮೆ ಕೊಡಿ. ಎಂದು ಮಾಜಿ ಸಚಿವರ ತೀವ್ರ ವಾಗ್ದಾಳಿ.
ಬಳ್ಳಾರಿ, ಆ. 9: ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಮಾಜಿ ಸಚಿವ ಹಾಗೂ ಶಾಸಕ ಬಿ.ಶ್ರೀರಾಮುಲು ಆಗ್ರಹಿಸಿದರು.
ನಗರದ ಸಿರುಗುಪ್ಪ ರಸ್ತೆ ಹವಂಭಾವಿ ಪ್ರದೇಶದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಬಿ.ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಒಂದು ಕಾಲದಲ್ಲಿ ವಿಮಾನದ ವೇಗದಲ್ಲಿ ಸಾಗುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ಎತ್ತಿನಬಂಡಿಯ ವೇಗಕ್ಕೂ ಇಳಿದಿದೆ. ಇದಕ್ಕೆ ಕಾರಣ ದೇಶದ ಜನರು ಕಾಂಗ್ರೆಸ್‌ನ ಮೂರು ತಲೆಮಾರುಗಳ ಭ್ರಷ್ಟಾಚಾರವನ್ನು ಕಂಡು ಬೇಸತ್ತಿರುವುದೇ ಕಾರಣ” ಎಂದು ಶ್ರೀರಾಮುಲು ಟೀಕಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಹೊಸದಲ್ಲ.
ನೆಹರು ಅವರ ಕಾಲದಿಂದ ಆರಂಭವಾದ ಹಗರಣಗಳ ಸರಣಿ ಇಂದಿನ ಕಾಂಗ್ರೆಸ್ ನಾಯಕರವರೆಗೂ ಮುಂದುವರಿದಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.
ಮಾಜಿ ಸಚಿವ ಬಿ.ನಾಗೇಂದ್ರ ಅವರ ವಿರುದ್ಧದ ಆರೋಪಗಳನ್ನು ಪ್ರಸ್ತಾಪಿಸಿದ ಶ್ರೀರಾಮುಲು, ವಾಲ್ಮೀಕಿ ಸಮುದಾಯದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಅತ್ಯಂತ ಗಂಭೀರವಾಗಿದೆ. ಬಡ ಮಕ್ಕಳ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿದ್ದ ಹಣದ ವಿಚಾರದಲ್ಲಿ ಆರೋಪಗಳು ಕೇಳಿಬಂದಿವೆ.
ಈ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರೆ ಅದಕ್ಕೆ ನೈತಿಕ ಹೊಣೆ ಹೊತ್ತು ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
“ಭ್ರಷ್ಟಾಚಾರಕ್ಕೆ ಯಾವುದೇ ಸಮುದಾಯದ ಹೆಸರು ಬಳಕೆಯಾಗಬಾರದು. ಒಬ್ಬ ವ್ಯಕ್ತಿಯ ತಪ್ಪನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ಸರಿಯಲ್ಲ. ನಾಗೇಂದ್ರ ಅವರೇ, ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ. ನಿಜವಾಗಿಯೂ ನೀವು ವಾಲ್ಮೀಕಿ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದರೆ, ನಮ್ಮ ಬಡ ಮಕ್ಕಳ ಹಣದ ವಿಚಾರದಲ್ಲಿ ಜನರಿಗೆ ಉತ್ತರ ನೀಡಿ” ಎಂದು ಶ್ರೀರಾಮುಲು ಸವಾಲು ಹಾಕಿದರು.
ಜನಾರ್ದನ ರೆಡ್ಡಿ ಅವರು ನಾಗೇಂದ್ರ ಅವರನ್ನು ದಲಿತ ಎಂದು ಉಲ್ಲೇಖಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಶ್ರೀರಾಮುಲು, ದಲಿತ ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡುವುದು ಬೇಡ. ಸಮುದಾಯದ ಬಡ ಮಕ್ಕಳಿಗೆ ಮೀಸಲಾದ ಹಣದ ರಕ್ಷಣೆಯೇ ಮುಖ್ಯ ಎಂದು ಹೇಳಿದರು.
ಬಳ್ಳಾರಿ ಚಂದ್ರಶೇಖರ್ ಕೊಲೆ ಪ್ರಕರಣದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಈ ಪ್ರಕರಣದಿಂದ ಕುಟುಂಬವೊಂದು ಕಣ್ಣೀರಿನಲ್ಲಿ ಮುಳುಗಿದೆ ಎಂದು ಆರೋಪಿಸಿದರು. ನಾಗೇಂದ್ರ ಅವರು ಈ ಪ್ರಕರಣದ ಕುರಿತು ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
“ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಈ ವಿಚಾರದಲ್ಲಿ ಹೋರಾಟ ಮುಂದುವರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಾಗೇಂದ್ರ ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಶ್ರೀರಾಮುಲು ಹೇಳಿದರು.
ಇದೇ ವೇಳೆ ಶಾಸಕ ಹಾಗೂ ಸಚಿವ ಸ್ಥಾನಕ್ಕೆ ಸಂಬಂಧಿಸಿದ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದ ಅವರು, ಒಬ್ಬರಿಗೆ ಸಚಿವ ಸ್ಥಾನ ನೀಡಿ, ಮತ್ತೊಬ್ಬ ಶಾಸಕ ರಾಜೀನಾಮೆ ನೀಡುವಂತೆ ಮಾಡುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
“ಒಬ್ಬರಿಗೆ ಸಚಿವ ಸ್ಥಾನ ನೀಡುವ ಸಂದರ್ಭದಲ್ಲಿ ಮತ್ತೊಬ್ಬರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯುವುದಾದರೆ, ಇದೇ ಮಾನದಂಡ ಎಲ್ಲರಿಗೂ ಅನ್ವಯವಾಗಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ” ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ ಎಂದು ಆರೋಪಿಸಿದ ಅವರು, ಜನರ ತೆರಿಗೆ ಹಣ ಹಾಗೂ ಬಡವರ ಕಲ್ಯಾಣಕ್ಕಾಗಿ ಮೀಸಲಿರುವ ಹಣ ದುರುಪಯೋಗವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಬಳೇಶ್, ಮೌತಕರ್ ಶ್ರೀನಿವಾಸ್, ಸಣ್ಣ ಪಕ್ಕೀರಪ್ಪ, ವೆಂಕಟರಮಣ ರೆಡ್ಡಿ, ಗುಡಿಗಂಟಿ ಹನುಮಂತ, ಕೆ.ಎಸ್.ಅಶೋಕ್ ಕುಮಾರ್, ಕೋಣಂಕಿ ತಿಲಕ್, ಹನುಮಂತಪ್ಪ, ತಿಮ್ಮಪ್ಪ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.













